ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಬಿಡಲಾಗುತ್ತಿರುವ ರಭಸಕ್ಕೆ ಡ್ಯಾಂನ ಪಕ್ಕ ಕೆಳಗಡೆ ಪಾಶ್ವ೯ದಲ್ಲಿ ಸುಮಾರು 10 ಎಕ್ರೆಯಷ್ಟು ತೋಟ, ಗದ್ದೆಗಳು ಕೊಚ್ಚಿ ಹೋಗಿ ರೈತರಿಗೆ ಅಪಾರ ನಷ್ಟವುಂಟಾಗಿದ್ದು, ಈ ಹಿನ್ನಲೆಯಲ್ಲಿ ಡ್ಯಾಂನ ಹತ್ತಿರವಿರುವ ನೀರು ಪೂರೈಕಾ ಕಚೇರಿಗೆ ದಶಂಬರ್ 26 ರಂದು ಬೀಗ ಜಡಿದು ಆಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದ.ಕ.ಜಿಲ್ಲಾ ಸಮಿತಿಯ ಪ್ರಕಟಣೆ ತಿಳಿಸಿದೆ.

ಶುಕ್ರವಾರ ನಡೆದ ಸಂಘದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಲವು ವರ್ಷಗಳಿಂದ ತುಂಬೆ ಡ್ಯಾಂ ನ ಪಕ್ಕದ ಕೆಳಗಡೆಯ ಬಲಪಾಶ್ವ೯ದಲ್ಲಿ ನೀರಿನ ರಭಸಕ್ಕೆ ಅಡಕೆ, ತೆಂಗಿನ ತೋಟ ಮತ್ತು ಗದ್ದೆಗಳಿಗೆ ಹಾನಿಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ, ಮಹಾನಗರಪಾಲಿಕೆ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಪರ್ಯಾಯ ವ್ಯವಸ್ಥೆಯನ್ನು ಕೂಡ ಮಾಡಿರುವುದಿಲ್ಲ ಈ ಬಗ್ಗೆ ಸಭೆ ಅಸಮಾಧಾನ ವ್ಯಕ್ತಪಡಿಸಿತು.
ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ರೈತರನ್ನು ಕೂಪಕ್ಕೆ ತಳ್ಳುವ ಮತ್ತು ನಿರ್ಲಕ್ಷ್ಯವನ್ನು ಖಂಡಿಸಿ ಡ್ಯಾಂನ ಪಕ್ಕದಲ್ಲಿರುವ ನೀರು ಪೂರೈಕಾ ಕಚೇರಿಗೆ ಬೀಗ ಜಡಿದು ಆಹೋರಾತ್ರಿ ಹೋರಾಟವನ್ನು ನಡೆಸಲು ಮುಂದಾಗಿದ್ದು, ರೈತರು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದ.ಕ.ಜಿಲ್ಲಾ ಸಮಿತಿ ಕೋರಿದೆ.
