ಮಕ್ಕಳಿಗೆ ದೇಶಪ್ರೇಮ ಬೆಳೆಸಲು ಸ್ಕೌಟ್ಸ್-ಗೈಡ್ಸ್ ಸಹಕಾರಿ: ರೋ. ಪ್ರಕಾಶ್ ಕಾರಂತ್
ಬಂಟ್ವಾಳ: ಮಕ್ಕಳಿಗೆ ಎಳವೆಯಲ್ಲೇ ದೇಶಪ್ರೇಮ, ಪ್ರಾಣಿದಯೆ, ಸಹಕಾರ ಮನೋಭಾವನೆ, ಪರಿಸರ ಪ್ರೇಮವನ್ನು ಬೆಳೆಸಲು ಸ್ಕೌಟ್ಸ್-ಗೈಡ್ಸ್ ಸಹಕಾರಿಯಾಗಿದೆ ಎಂದು ಬಂಟ್ವಾಳ ತಾಲೂಕು ಸ್ಕೌಟ್ಸ್ ಗೈಡ್ಸ್ ಒಕ್ಕೂಟದ ಅಧ್ಯಕ್ಷ ರೋ. ಪ್ರಕಾಶ್ ಕಾರಂತ್ ರವರು ಹೇಳಿದ್ದಾರೆ.
ಬಂಟ್ವಾಳ ತಾಲೂಕು ನೆಟ್ಲ ಮೂಡ್ನೂರು ಗ್ರಾಮದ ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಘ ಮಾಣಿ ಇದರ 15 ನೇ ವರ್ಷದ ವಾರ್ಷಿಕ ಸ್ಕೌಟ್ಸ್ ಮತ್ತು ಗೈಡ್ಸ್ ರ‍್ಯಾಲಿ ಹಾಗೂ ಕಬ್ಸ್, ಬುಲ್ ಬುಲ್ಸ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆ ಮಾಣಿ ಇದರ ಅಧ್ಯಕ್ಷ ಪ್ರಹ್ಲಾದ್ ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಏಮಾಜೆ ಶಾಲೆಗೆ ಸ್ಥಳೀಯ ಸಂಸ್ಥೆಯ ವತಿಯಿಂದ 25 ಸಾ.ರೂ.ನ ಚೆಕ್ಕನ್ನು ಶಾಲಾ ಅಭಿವೃದ್ಧಿ ಸಮಿತಿಗೆ ಹಾಗೂ ಮುಂದಿನ ವರ್ಷದ ರ‍್ಯಾಲಿ ನಡೆಸುವ ಜವಾಬ್ದಾರಿಯನ್ನು ವಹಿಸಲಿರುವ ಅನಂತಾಡಿ ಸರಕಾರಿ ಪ್ರಾಥಮಿಕ ಶಾಲೆಗೆ ಸ್ಕೌಟ್ ಧ್ವಜವನ್ನು ಶಾಲಾ ಶಾರೀರಿಕ ಶಿಕ್ಷಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪ್ರಸೂತಿ ಪರಿಣತೆ ಪೂವಕ್ಕ ಪೂಂಜ ಕರಿಂಕ ಹೊಸವಕ್ಲು, ಮಂಗಳೂರು ಎಜೆ ಸಂಶೋಧನ ಕೇಂದ್ರದ ಗ್ಯಾಸ್ಟ್ರೋ ಸರ್ಜನ್ ಡಾ. ಅಶ್ವಿನ್ ಆಳ್ವ, ನಿವೃತ್ತ ಯೋಧ ಮೋಹನ್ ಗೌಡ ಕೊಂಕಣ ಕೂಡಿ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಉಮ್ಮರಗಿ ಶರಣಪ್ಪ ಹಾಗೂ ಸ್ಕೌಟ್ಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಮಾಣಿ ಗ್ರಾಮ ಪಂಚಾಯಿತ್ ಅಧ್ಯಕ್ಷ ಇಬ್ರಾಹಿಂ ಇವರನ್ನು ಅಭಿನಂದಿಸಲಾಯಿತು.
ಕಳೆದ ಅವಧಿಯಲ್ಲಿ ಮಾಣಿ ವಲಯದ ಶಾಲೆಗಳಲ್ಲಿ ಸ್ಕೌಟ್ಸ್ – ಗೈಡ್ಸ್ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಗೌರವಿಸಲಾಯಿತು.
ವಿವಿಧ ವಿಷಯಗಳಲ್ಲಿ ಸಾಧನೆಗೈದ ಸ್ಕೌಟ್ಸ್ ,ಗೈಡ್ಸ್ ,ಕಬ್ಸ್, ಬುಲ್ ಬುಲ್ಸ್ ವಿದ್ಯಾರ್ಥಿಗಳನ್ನುಅಭಿನಂದಿಸಲಾಯಿತು.
ನೆಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಮಿತಾ ಡಿ ಪೂಜಾರಿ, ಉಪಾಧ್ಯಕ್ಷ ಸಚ್ಚಿದಾನಂದ, ಸದಸ್ಯರಾದ ಧನಂಜಯ ಗೌಡ, ಶಕೀಲಾ ಕೃಷ್ಣ ಮಿತ್ತ ಕೋಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಲ್ಲಿಕಾ ಗಣೇಶ್, ಉಪಾಧ್ಯಕ್ಷ ಪ್ರಸಾದ್ ಆಚಾರ್ಯ, ಭಾರತ್ ಸ್ಕೌಟ್ ಗೈಡ್ಸ್ ನ ರಾಜ್ಯ ಸಂಘಟನಾ ಆಯುಕ್ತ ಭರತ್ ರಾಜ್, ಜಿಲ್ಲಾ ಕಾರ್ಯದರ್ಶಿ ಎಂ.ಜೆ ಕಜೆ, ಪಾಣೆಮಂಗಳೂರು ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಜಯಂತ್ ನಾಯಕ್, ಕಬಕ ಜೂನಿಯರ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೇಮಲತಾ, ಸ್ಕೌಟ್ಸ್ ಗೈಡ್ಸ್ ರ‍್ಯಾಲಿ ನಿರ್ದೇಶಕರಾದ ಏಮಾಜೆ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಶ್ಯಾಮಲ ಕೆ ಸ್ವಾಗತಿಸಿ, ಕಾರ್ಯದರ್ಶಿ ಉಮ್ಮರಗಿ ಶರಣಪ್ಪ ವಂದಿಸಿದರು. ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು.