ಕೆದಿಲ- ಪೆರಾಜೆ ಗೋಮಾಳ ಜಮೀನು ಅತಿಕ್ರಮಣ ತೆರವಿಗೆ ಒತ್ತಾಯಿಸಿ ಮನವಿ
ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳ ಇದರ ಸಹಯೋಗದಲ್ಲಿ ಗೋಮಾಳ ಸಂರಕ್ಷಣಾ ಸಮಿತಿ ಕೆದಿಲ – ಪೆರಾಜೆ ವತಿಯಿಂದ ಕೆದಿಲ ಮತ್ತು ಪೆರಾಜೆ ಗ್ರಾಮಗಳಲ್ಲಿ ಗೋಮಾಳದ ಜಮೀನಿನನ್ನು ಅಕ್ರಮವಾಗಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವುದು ಮತ್ತು ಗಡಿ ಗುರುತು ಮಾಡಿ ಸಂರಕ್ಷಿಸಿ ಉದ್ದೇಶಿತ ಕಾರ್ಯಕ್ಕೆ ಬಳಸುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕಿನ ಉಪತಹಶೀಲ್ದಾರ್ ಅವರಿಗೆ ಬುಧವಾರ ಮನವಿ ನೀಡಲಾಯಿತು.
ಕೆದಿಲ ಗ್ರಾಮ ಹಾಗೂ ಪೆರಾಜೆ ಗ್ರಾಮದ ಗಡಿ ಪ್ರದೇಶವಾದ ಗಡಿಯಾರ ಸ್ವಾಗತ ನಗರದ ಬಳಿ, ಕೆದಿಲ ಗ್ರಾಮದ ಸ.ನಂ.11/1 ರಲ್ಲಿ 14.56 ಎಕರೆ ಹಾಗೂ ಪೆರಾಜೆ ಗ್ರಾಮದ ಸ.ನಂ.164/1 ರಲ್ಲಿ 19.75 ಎಕರೆ ಗೋಮಾಳದ ಜಾಗವಿದ್ದು, ಕೆಲ ವರುಷಗಳಿಂದ ಅನ್ಯಕೋಮಿನ ವ್ಯಕ್ತಿಗಳು ಅತಿಕ್ರಮಿಸಿ ಮನೆ ನಿರ್ಮಾಣ ಮಾಡಿದ್ದಾರೆ ಇದಕ್ಕೆ ಮೂಲಭೂತ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಗಣರಾಜ ಭಟ್ ಆರೋಪಿಸಿದ್ದಾರೆ.
ಈ ಅತಿಕ್ರಮಣದ ವಿರುದ್ಧ 2013 ರಿಂದಲೇ ಹೋರಾಟ ನಡೆಸಲಾತ್ತಿದ್ದರೂ, ಕೆಲ ರಾಜಕೀಯ ಮುಖಂಡರ ಕೃಪಾಶೀರ್ವಾದಿಂದಾಗಿ ಅತಿಕ್ರಮಣಗಾರರನ್ನು ರಕ್ಷಿಸಲಾಗುತ್ತಿದೆ. ರಾಜಕಾರಣಿಗಳ ಒತ್ತಡ ಹಾಗೂ ಹಣ ಬಲದಿಂದ ಅಧಿಕಾರಿಗಳು ಗೋಮಾಳ ಅತಿಕ್ರಮಣವನ್ನು ತೆರವು ಗೊಳಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಕಂದಾಯ ಅಧಿಕಾರಿಗಳು ಅಕ್ರಮ ಮನೆಗಳನ್ನು ತೆರವುಗೊಳಿಸಿದ್ದರೂ ಮತ್ತೆ ಅಲ್ಲಿ ಮನೆ ನಿರ್ಮಾಣಕ್ಕಾಗಿ ಕಾಮಗಾರಿಗಳು ನಡೆಯುತ್ತಿವೆ ಎಂದು ದೂರಿರುವ ಪ್ರತಿಭಟನಾಕಾರರು ಅತಿಕ್ರಮಣಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದ್ದು, ಗೋಮಾಳ ಜಮೀನಿನಲ್ಲಿ ಗೋಶಾಲೆ, ಪಶು ಸಂಗೋಪನೆ, ಪಶು ಸಂಬಂಧಿತವಾದ ಉದ್ದೇಶಿತ ಕಾರ್ಯಗಳಿಗೆ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಪೆರಾಜೆ ಸಂಚಾಲಕ ಶ್ರೀನಿವಾಸ ಪೆರಾಜೆ, ಕೆದಿಲ ಸಂಚಾಲಕ ವಿಶ್ವನಾಥ ಶೆಟ್ಟಿ ಕೆದಿಲ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ನರಸಿಂಹ ಶೆಟ್ಟಿ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ, ಕುಸುಮಾಧರ, ಸತೀಶ್, ಲಿಖಿತ್, ತಿಲಕ್, ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ, ಬಜರಂಗದಳ ಪ್ರಮುಖರಾದ ರೂಪೇಶ್ ಪೂಜಾರಿ, ಮಹೇಂದ್ರ ಅಶ್ವತ್ತಾಡಿ, ಚಿರಂಜೀವಿ, ಸತೀಶ್ ಮಿತ್ತೂರು, ಉದಯ ಜೋಗಿಬೆಟ್ಟು, ಹೊನ್ನಪ್ಪ ಬಡೆಕೋಡಿ, ನೇರಳಕಟ್ಟೆ ಸಿ.ಎ.ಬ್ಯಾಂಕ್ ನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾಣಿ, ಗ್ರಾ.ಪಂ. ಸದಸ್ಯರಾದ ಹರೀಶ್ ರೈ ಪೆರಾಜೆ, ರಾಜಾರಾಮ್ ಭಟ್ ಕಾಡೂರು, ಉಮೇಶ್ ಮುರುವ, ಒಕೆ ಶ್ಯಾಮಪ್ರಸಾದ್ ಭಟ್, ಗ್ರಾಮದ ಪ್ರಮುಖರಾದ ರಾಘವ ಗೌಡ ಪೆರಾಜೆ, ನಟರಾಜ್ ಭಟ್, ವಕೀಲರಾದ ಅರುಣ್ ಭಟ್, ಗಣಪತಿ ಭಟ್ ಮತ್ತಿತರ ಪ್ರಮುಖರು ಹಾಜರಿದ್ದರು.