ಸಾಹಿತ್ಯ, ಬರಹಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ : ಬಾಲಕೃಷ್ಣ ಸೆರ್ಕಳ
ಬಂಟ್ವಾಳ: ಸಾಹಿತ್ಯ ,ಬರಹಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಸಾಧನವಾಗಿವೆ. ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲಿ ಒಲವು ತೋರಿಸಿದರೆ ಮುಂದಕ್ಕೆ ದೊಡ್ಡ ಸಾಧನೆ ಮಾಡಬಹುದು ಎಂದು ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲಾ ಎಸ್ .ಡಿ .ಎಂ .ಸಿ ಅಧ್ಯಕ್ಷ ಬಾಲಕೃಷ್ಣ ಸೆರ್ಕಳರವರು ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಎರಡು ದಿನಗಳ ಕಾಲ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಬಂಟ್ಟಾಳ ತಾಲೂಕು ಹಾಗೂ ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು ಇದರ ಜಂಟಿ ಆಶ್ರಯದಲ್ಲಿ ನಡೆದ ಬಂಟ್ಟಾಳ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸಾಹಿತ್ಯ ಪರಿಷತ್ ದ.ಕ ಜಿಲ್ಲಾಧ್ಯಕ್ಷೆ ಪರಿಮಳ ಮಹೇಶ ರಾವ್ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ದೇವಿಪ್ರಸಾದ್ ಚೆಂಗಲ್ಪಾಡಿ, ಗೌರವ ಸಲಹೆಗಾರ ಬಾಲಕೃಷ್ಣ ಕಾರಂತ್ ಎರುಂಬು, ಶಾಲಾ ಮುಖ್ಯೋಪಾಧ್ಯಾಯ ಸುಶೀಲಾ ವಿಟ್ಲ, ಸಾಹಿತಿ ಹಾಗೂ ಪತ್ರಕರ್ತ ಜಯಾನಂದ ಪೆರಾಜೆ ಅತಿಥಿಗಳಾಗಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪರಿಷತ್ತಿನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ನೇರಳಕಟ್ಟೆಯವರನ್ನು ಗೌರವಿಸಲಾಯಿತು.
ಶಿಬಿರದಲ್ಲಿ ಜಯಾನಂದ ಪೆರಾಜೆ ಚುಟುಕು ಕವನ, ರಶ್ಮಿತಾ ಸುರೇಶ್ ಜೋಗಿಬೆಟ್ಟು ಹಾಸ್ಯ ಸಾಹಿತ್ಯ, ಸುರೇಖಾ ಯಳವಾರ ಮಕ್ಕಳ ಸಾಹಿತ್ಯ, ತಾರಾನಾಥ್ ಕೈರಂಗಳ ಚಿತ್ರ ಸಾಹಿತ್ಯ, ಜಯರಾಮ ಪಡ್ರೆ ಕಥನ ಕಾವ್ಯ, ಗೋಪಾಲಕೃಷ್ಣ ನೇರಳಕಟ್ಟೆ ಸೃಜನಶೀಲ ಸಾಹಿತ್ಯ, ಅಬ್ಬುಲ್ ಮಜೀದ್ ತುಂಬೆ ಮೌಲ್ಯ ಸಾಹಿತ್ಯ, ಶ್ರೀಕಲಾ ಕಾರಂತ ಅಳಿಕೆ ಬಾಲ ಸಾಹಿತ್ಯ, ಎಂ.ಡಿ ಮಂಚಿ ನಾಟಕ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು.
ಶಾಲೆಯ ಶಿಕ್ಷಕ ವೃಂದ ಸಹಕರಿಸಿತು. ತರಬೇತಿಯಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳ ಸುಮಾರು 125 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಕಲಾ ಕಾರಂತ್ ಅಳಿಕೆ ಸ್ವಾಗತಿಸಿ, ವಲಯ ಸಂಯೋಜಕಿ ತುಳಸಿ ಕೈರಂಗಳ ವಂದಿಸಿದರು. ಶಿಕ್ಷಕ ಕಲಾವಿದ ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.