ಮಂಗಳಾ ಕ್ರೀಡಾಂಗಣದಲ್ಲಿ ಬಂಟ್ವಾಳ ತಾಲೂಕು, ʼಕ್ರೀಡಾಕೂಟ ಉದ್ಘಾಟನೆʼ ಸುಸಜ್ಜಿತ ಕ್ರೀಡಾಂಗಣಕ್ಕಾಗಿ “ಖೇಲ್ ಇಂಡಿಯಾ”ಕ್ಕೆ 100 ಕೋ.ರೂ.ಪ್ರಸ್ತಾವನೆ ಸಲ್ಲಿಕೆ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ: ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಸುಸಜ್ಜಿತ ಕ್ರೀಡಾಂಗಣದ ನಿರ್ಮಾಣಕ್ಕಾಗಿ ನೂರು ಕೋಟಿ ರೂಪಾಯಿಯ ಪ್ರಸ್ತಾವೆಯನ್ನು ಕೇಂದ್ರ ಸರಕಾರದ “ಖೇಲ್ ಇಂಡಿಯಾ”ಕ್ಕೆ ಸಲ್ಲಿಸಲಾಗಿದ್ದು, ಶೀಘ್ರವೇ ಇದಕ್ಕೆ ಮಂಜೂರಾತಿ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಕ್ರೀಡಾ ಸಚಿವರನ್ನು ಭೇಟಿಯಾಗಿ ಪ್ರಯತ್ನಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಗುರುವಾರ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ದ.ಕ.ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ತುಂಬೆ ಪ್ರೌಢಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ
ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ 2023 – 24ರ “ಕ್ರೀಡಾಕೂಟ”ವನ್ನು ಪಾರಿವಾಳ ಹಾಗೂ ಬೆಲೂನ್ ಹಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಗೆಲುವು ಎನ್ನುವುದು ಎಲ್ಲರಿಂದಲೂ ಸಾಧ್ಯವಾಗದು, ಆದರೂ ಪ್ರಯತ್ನ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ. ಅಬ್ದುಲ್ ಸಲಾಂ ಅವರು ವಹಿಸಿ ಮಾತನಾಡಿ ಕ್ರೀಡೆ ಎನ್ನುವುದು ಆರೋಗ್ಯ ಪೂರ್ಣ ಸ್ಪರ್ಧೆಯಾಗಿದ್ದು ಶಿಸ್ತು ಮತ್ತು ಸಂಯಮವನ್ನು ಕಲಿಸಿಕೊಡುತ್ತದೆ. ಪ್ರತಿಭೆಯನ್ನು ಪ್ರದರ್ಶಿಸಲು ಒಳ್ಳೆಯ ವೇದಿಕೆಯಾಗಿ ಕ್ರೀಡಾ ಕ್ಷೇತ್ರ ಸಹಕರಿಸುತ್ತದೆಯಲ್ಲದೆ ಕ್ರೀಡಾಕೂಟವೆನ್ನುವುದು ಸ್ಮರಣೀಯ ಕ್ಷಣಗಳಾಗಿಯು ಉಳಿಯುತ್ತದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಧ್ವಜಾರೋಹಣಗೈದು ಶುಭ ಹಾರೈಸಿದರು.
ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೀಶ್ ಸಾಲಿಯಾನ್ ಒಲಿಂಪಿಕ್ ಧ್ವಜಾರೋಹಣ ಮಾಡಿದರು. ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿದರು.
ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತುಂಬೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರವೀಣ್ ತುಂಬೆ, ತುಂಬೆ ಪಿ.ಟಿ.ಎ. ಅಧ್ಯಕ್ಷ ನಿಸಾರ್ ಅಹಮ್ಮದ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಉಮಾನಾಥ್ ರೈ ಮೇರಾವು, ಬಿ.ಎ.ಐ.ಟಿ.ಐ ಪ್ರಾಂಶುಪಾಲ ನವೀನ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷೆ ರತ್ನಾವತಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಾಯೆಲ್, ಬಿ.ಎಂ.ತುಂಬೆ, ಸದಾಶಿವ ಡಿ.ತುಂಬೆ,ಇಬ್ರಾಹಿಂ ವಳವೂರು, ಶಿಕ್ಷಣ ಸಂಯೋಜಕಿ ಕೆ. ಸುಜಾತ ಕುಮಾರಿ, ಸುಧಾ, ಪದ್ಮಾವತಿ, ತುಂಬೆ ಪ್ರೌಢಶಾಲಾ ಮುಖ್ಯಸ್ಥೆ ವಿದ್ಯಾ ಕೆ., ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ.ನಾಯಕ್, ಅಬ್ದುಲ್ ಗಫೂರ್, ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನ ಗೊನ್ಸಾಲ್ವಿಸ್, ಪಿ.ಟಿ.ಎ ಉಪಾಧ್ಯಕ್ಷೆ ಮೋಹಿನಿ, ರಮೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆದಿಲ ಹಾಗೂ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಲಿಲ್ಲಿ ಪಾಯಸ್ ಅವರನ್ನು ಸನ್ಮಾನಿಸಲಾಯಿತು.
ತುಂಬೆ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಬಿ. ವಂದಿಸಿದರು. ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಯ ಅಧೀಕ್ಷಕರಾದ ಅಬ್ದುಲ್ ಕಬೀರ್ ಬಿ.ಕಾರ್ಯಕ್ರಮ ನಿರೂಪಿಸಿದರು.
ಎರಡು ದಿನಗಳ ಈ ಕ್ರೀಡಾಕೂಟದಲ್ಲಿ ಸುಮಾರು ಎರಡು ಸಾವಿರ ಕ್ರೀಡಾಪಟುಗಳು ಭಾಗವಹಿದರು.