“ಬಂಟ್ವಾಳ ದಸರಾ” ಕ್ಕೆ ಅದ್ದೂರಿಯ ತೆರೆ
ಬಂಟ್ವಾಳ: “ಚಿನ್ನದಪೇಟೆ” ಬಂಟ್ವಾಳದ ಶ್ರೀತಿರುಮಲ ವೆಂಕಟರಮಣ ಸ್ವಾಮಿ ದೇವಳದಲ್ಲಿ ಐದು ದಿನಗಳಲ್ಲಿ ಆರಾಧಿಸಲ್ಪಟ್ಟ ಸಾರ್ವಜನಿಕ ಶ್ರೀಶಾರದ ಮಾತೆಯ ವಿಸರ್ಜನಾ ಶೋಭಾಯಾತ್ರೆಯು ಬುಧವಾರ ರಾತ್ರಿ ಜನಸ್ತೋಮದ ನಡುವೆ ವೈಭವಯುತವಾಗಿ ನಡೆದು ಗುರುವಾರ ಮುಂಜಾನೆ ತೆರೆಬಿತ್ತು.

ಮಲ್ಲಿಗೆಯ ಜಲ್ಲಿಯನ್ನು ಮುಡಿಸಿ ವೀಣಾ ಧಾರಿಣಿ ಶಾರದಾ ಮಾತೆಯನ್ನು ಸರ್ವಾಲಾಂಕಾರಗೊಳಿಸಿದ ಬಳಿಕ ಪ್ರತಿಷ್ಠಾಪನಾ ಸ್ಥಳದಲ್ಲಿ ಶ್ರೀ ಶಾರದಾಮಾತೆಗೆ ವಿಸರ್ಜನಾ ಪೂಜೆ ನೆರವೇರಿಸಿದರು.
ನಂತರ ಸಾರ್ವಜನಿಕ ವೇದಿಕೆಯಲ್ಲಿ ವೇಷಧಾರಿಗಳ ಕುಣಿತಕ್ಕೆ ಅನುವು ಮಾಡಿಕೊಡಲಾಯಿತು. ಹುಲಿವೇಷ ಸಹಿತ ವಿವಿಧ ವೇಷಧಾರಿಗಳು ತಮ್ಮ ಕುಣಿತವನ್ನು ಪ್ರದರ್ಶಿಸಿ ನೆರೆದ ಜನಸ್ತೋಮವನ್ನು ರಂಜಿಸಿದರು.

ದೇವಸ್ಥಾನದ ವಠಾರದಿಂದ ಹೊರಟ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ರಥಬೀದಿಯುದ್ದಕ್ಕು ಸಾಗಿ, ಬೈಪಾಸ್ ಶ್ರೀರಾಮನಗರದ ಶ್ರೀ ರಾಮಭಜನಾ ಮಂದಿರದ ತನಕ ತೆರಳಿ ಅಲ್ಲಿಂದ ವಾಪಾಸ್ ಅದೇ ಮಾರ್ಗವಾಗಿ ಬಂದು ನೇರ ಮಾರ್ಕೆಟ್ ರಸ್ತೆಯ ಮೂಲಕ ಶ್ರೀ ಹನುಮಾನ್ ದೇವಸ್ಥಾನಕ್ಕೆ ತಲುಪಿ ಅಲ್ಲಿಂದ ವಾಪಾಸ್ ಬಂದು ತ್ಯಾಗರಾಜ ರಸ್ತೆಯ ಮೂಲಕ ಸಾಗಿ ದೇವಳದ ಮುಂಭಾಗದಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ವಿಶೇಷವಾಗಿ ಶಾರದಮಾತೆಯ ವಿಗ್ರಹವನ್ನು ಭಜಕರು ತಮ್ಮ ಭುಜ ಸೇವೆಯ ಮೂಲಕ ಸಾಗಿದರು. ದಾರಿಯುದ್ದಕ್ಕೂ”ಶಾರದಾಮಾತೆ,ಭಾರತ್ ಮಾತಾಕೀ ಜೈ” ಎಂಬ ಘೋಷಣೆ ಮೊಳಗಿದವು.
ಹುಲಿವೇಷಧಾರಿಗಳ ಕುಣಿತದ ಅಬ್ಬರ, ಡ್ಯಾನ್ಸ್ (ಅನರ್ ಕಲಿ), ರಸ್ತೆಯಲ್ಲೇ ಸಾಗಿ ಬಂದ ಬೃಹತ್ ಚೇಳು, ವಿವಿಧ ಸ್ತಬ್ದಚಿತ್ರ, ಟ್ಯಾಬ್ಲೋಗಳು, ಚೆಂಡೆವಾದನ, ನಾಸಿಕ್ ಬ್ಯಾಂಡ್, ಮಕ್ಕಳ ಕುಣಿತ ಭಜನೆ ಜನಾಕರ್ಷಣೆಯ ಕೇಂದ್ರವಾಗಿತ್ತು. ಡಿ.ಜೆ.ಸೌಂಡ್ ನ ಅಬ್ಬರಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಸಾವಿರಾರು ಮಂದಿ ಭಕ್ತರು ರಸ್ತೆಯುದ್ದಕ್ಕು ನಿಂತು ಶಾರದಾ ಮಾತೆಯ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.
ದೇವಳದ ಆಡಳಿತ ಮೊಕ್ತೇಸರರು,ಮೊಕ್ತೇಸರರು ಸಹಿತ ಪ್ರಮುಖರು ಕೊನೆಯವರೆಗೂ ಮರವಣಿಗೆಯಲ್ಲಿದ್ದರು.