15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಗೆ ಪ್ರಭು ಮನವಿ
ಬಂಟ್ವಾಳ: 2022-23 ನೇ ಸಾಲಿನ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ 15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಗೊಳಿಸುವಂತೆ ಬಂಟ್ವಾಳ ತಾ.ಪಂ.ನ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ 15ನೇ ಹಣಕಾಸು ಯೋಜನೆಯಡಿ ನಿಗದಿ ಪಡಿಸಿದ ಅನುದಾನದಂತೆ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ,ಗಾಂಧಿ ಸಾಕ್ಷಿ ಕಾಯಕದಲ್ಲಿ ದಾಖಾಲಿಸಿಕೊಂಡು ಅನುಮೋದನೆ ಪಡೆಯಲಾಗಿರುತ್ತದೆ.ಅದರಂತೆ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿಗಳು ಪೂರ್ಣಗೊಂಡಿರುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಆದರೆ ಇದುವರೆಗೂ ಸರಕಾರದಿಂದ ಅನುದಾನ ಬಿಡುಗಡೆಯಾಗದಿದ್ದು,ಕಾಮಗಾರಿಗಳನ್ನು ಪೂರೈಸಿದ ಗುತ್ತಿಗೆದಾರರು ಕಂಗಲಾಗಿದ್ದಾರೆ.
ಹಾಗಾಗಿ 2022-23ನೇ ಸಾಲಿಗೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ 15ನೇ ಹಣಕಾಸು ಯೋಜನೆಯಡಿ ನಿಗದಿ ಪಡಿಸಿದ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಪ್ರಭು ಮನವಿಯಲ್ಲಿ ಆಗ್ರಹಿಸಿದ್ದಾರೆ.ಮನವಿಯ ಪ್ರತಿಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ ರವಾನಿಸಿದ್ದಾರೆ.