ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಂಎಸ್ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಪ್ರತಿಭಟನೆ
ಬಂಟ್ವಾಳ: ಭಾರತೀಯ ಮಜ್ದೂರು ಸಂಘ( ಬಿ.ಎಂ.ಎಸ್.) ಇದರ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ”ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿ.ಸಿ.ರೋಡಿನ ಆಡಳಿತ ಸೌಧದ ಕಚೇರಿಯ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಬಳಿಕ ಶಾಸಕ ರಾಜೇಶ್ ನಾಯ್ಕ್ ಹಾಗೂ ತಹಶಿಲ್ದಾರ್ ಬಿ. ಎಸ್. ಕೂಡಲಗಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಪ್ರಸ್ತಾವಿಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಕಾರ್ಮಿಕರ ಹಲವು ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಕಾರ್ಯ ಮಾಡಲಾಗಿದೆ.ಅನೇಕ ಸವಲತ್ತುಗಳನ್ನು ಕಾರ್ಮಿಕರಿಗೆ ನೀಡಲಾಗಿತ್ತು ಎಂದು ತಿಳಿಸಿದರು.
ಬಿಎಂಎಸ್ ಕಟ್ಟಡ ವಿಭಾಗದ ಜಿಲ್ಲಾ ಸಂಘಟನಾ ಕಾರ್ಯದರ್ಶಿ,ಬಂಟ್ವಾಳ ತಾಲೂಕು ಪ್ರಭಾರಿ ಕುಮಾರನಾಥ ಕಲ್ಮಂಜ ಮಾತನಾಡಿ,ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಇರುವ “ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ” ಯಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಣಯಗಳಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ.
ಈ ಕುರಿತು ಸಂಘವು ಹಲವಾರು ಬಾರಿ ಮಂಡಳಿಯ ಉನ್ನತ ಅಧಿಕಾರಿಗಳು ಮತ್ತು ಕಾರ್ಮಿಕ ಸಚಿವರನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿ ಪರಿಹರಿಸುವಂತೆ ವಿನಂತಿಸಲಾಗಿತ್ತು,ಆದರೆ ಅಧಿಕಾರಿಗಳು ಹಾಗೂ ಸಚಿವರು ನೀಡಿರುವ ಆಶ್ವಾಸನೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ ಮತ್ತು ಕಾರ್ಮಿಕರ ಸೌಲಭ್ಯಗಳಲ್ಲಿ ಕಡಿತಗೊಳಿಸಲು ಮಂಡಳಿಯ ಅಧ್ಯಕ್ಷರು ತೀರ್ಮಾನಿಸಿರುವ ಕುರಿತು ಮಾಹಿತಿಗಳಿದ್ದು,ಈ ಏಕಪಕ್ಷೀಯ ನಿರ್ಧಾರಕ್ಕು ಸಂಘವು ಆಕ್ಷೇಪವನ್ನು ವ್ಯಕ್ತ ಪಡಿಸುವುದಾಗಿ ಅವರು ತಿಳಿಸಿದರು.
ನಾವು ಸರಕಾರದ ಮುಂದೆ ಬಿಟ್ಟಿ ಭಾಗ್ಯವನ್ನು ಕೇಳುತ್ತಿಲ್ಲ,ಕಾರ್ಮಿಕರಿಂದ ಪಡೆದುಕೊಂಡ ಹಣವನ್ನು ಕಾರ್ಮಿಕರ ಶ್ರೇಯೋಭಿವೃದ್ದಿ,ಭವಿಷ್ಯದ ಯೋಜನೆಗಳಿಗಾಗಿ ನೀಡುವಂತೆ ಅವರು ಆಗ್ರಹಿಸಿದರು.ಇದು ತಮ್ಮ ಸಾಂಕೇತಿಕ ಪ್ರತಿಭಟನೆಯಾಗಿದ್ದು,ಕಾರ್ಮಿಕರ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ವಿ.ಮಣಿಹಳ್ಳ,ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ,
ಜಿಲ್ಲಾ ಜತೆ ಕಾರ್ಯದರ್ಶಿ ಸಾಂತಪ್ಪ,ಬಿಎಂಎಸ್ ರಿಕ್ಷಾ ಮಾಲಕರ ಸಂಘದ ಬಂಟ್ವಾಳ ಘಟಕದ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್,ಬೂಡಾ ಮಾಜಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ,ರಾಯಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ರಾಯಿಬೆಟ್ಟು,ಕೇಶವ ದೈಪಲ ಮತ್ತಿತರರು ಉಪಸ್ಥಿತರಿದ್ದರು.