ಬಾಲವಿಕಾಸ ಶಾಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ
ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ ಮಾಣಿ ಇದರ ಜಂಟಿ ಆಶ್ರಯದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯು ಬಾಲವಿಕಾಸ ಶಾಲೆಯಲ್ಲಿ ಜರಗಿತು.

ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ಉಪನ್ಯಾಸಕ ಹರೀಶ್ ಶಾಸ್ತ್ರಿ ಸ್ಪರ್ಧೆಯನ್ನು ಉದ್ಘಾಟಸಿ ಮಾತನಾಡಿ “ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ತಮ್ಮ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುವುದು.ವಿವಿಧ ವಿಜ್ಞಾನಿಗಳು ಮಾಡಿದ ಆವಿಷ್ಕಾರಗಳಿಗಿಂತಲೂ ಅವರ ಜೀವನದ ಬಗ್ಗೆ ಅರಿವನ್ನು ಪಡೆದರೆ ನಮ್ಮ ಜೀವನವನ್ನು ನಾವು ಸುಂದರ ಗೊಳಿಸಿಕೊಳ್ಳಬಹುದು ಇಂತಹ ಅರಿವನ್ನು ಮೂಡಿಸುಕೊಳ್ಳುವಲ್ಲಿ ವಿಜ್ಞಾನ ನಾಟಕ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ.ಬಾಲವಿಕಾಸವು ಇಂತಹ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲಾ ಪ್ರಶಸ್ತಿ -ಪುರಸ್ಕಾರಗಳನ್ನೂ ಮೀರಿದ ಅನುಭವವನ್ನು ಶಾಲೆಯ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜೆ ” ಮುಂದಿನ ದಿನಗಳಲ್ಲಿಯೂ ಕೂಡ ಶಿಕ್ಷಣ ಇಲಾಖೆಯಿಂದ ನಡೆಯುವ ಇಂತಹ ಹತ್ತು ಹಲವಾರು ಸ್ಪರ್ಧೆಗಳಿಗೆ ಶಿಕ್ಷಕರ ಪ್ರೋತ್ಸಾಹ ಹಾಗೂ ಸಹಕಾರ ಅತೀ ಅಗತ್ಯ.ಮಕ್ಕಳು ಸ್ಪರ್ಧೆಯಲ್ಲಿ ಗೆಲ್ಲುವುದು ಮುಖ್ಯವಲ್ಲ,ಭಾಗವಹಿಸುವುದು ಮುಖ್ಯ ” ಎಂದರು.
ಅತಿಥಿಯಾಗಿದ್ದ ಶಿಕ್ಷಣ ಸಂಯೋಜಕರಾದ ಪ್ರತಿಮಾ ವೈ ವಿ ವಿಜ್ಞಾನ ನಾಟಕ ಸ್ಪರ್ಧೆಗಳಂತಹ ವಿವಿಧ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆಯ ವತಿಯಿಂದ ನಡೆಸುವುದರ ಉದ್ದೇಶವನ್ನು ವಿವರಿಸಿದರು.
ನಂತರ ದಿ.ಪಾಳ್ಯ ಅನಂತರಾಮ ರೈ ವೇದಿಕೆಯಲ್ಲಿ ವಿವಿಧ ಶಾಲಾ ತಂಡಗಳಿಂದ ವಿಜ್ಞಾನ ನಾಟಕ ಸ್ಪರ್ಧೆಗಳ ಪ್ರದರ್ಶನ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಸಂಪನ್ಮೂಲ ಅಧಿಕಾರಿ ಸತೀಶ್ ರಾವ್,ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ,ವಿಜ್ಞಾನ ನಾಟಕ ಸ್ಪರ್ಧೆಯ ತೀರ್ಪುಗಾರರು ಶಿಕ್ಷಕ ಚಿನ್ನಪ್ಪ ಜಾಲ್ಸೂರು,ದಾಮೋದರ್,ಶಾಲಾ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ಶಾಲಾಡಳಿತಾಧಿಕಾರಿ ರವೀಂದ್ರ ದರ್ಬೆ ಉಪಸ್ಥಿತರಿದ್ದರು.
ನಾಟಕ ನಿರ್ದೇಶಕರಾದ ಮೌನೇಶ್ ವಿಶ್ವಕರ್ಮ,ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿಜ್ಞಾನ ನಾಟಕ ತಂಡಗಳು,ಬಾಲವಿಕಾಸ ಶಾಲಾ ಸಿಬ್ಬಂದಿಗಳು,ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ವಿ ಶೆಟ್ಟಿ ಸ್ವಾಗತಿಸಿ,ಸಹ ಶಿಕ್ಷಕಿ ರಶ್ಮಿ ಕೆ ಫೆರ್ನಾಂಡಿಸ್ ವಂದಿಸಿದರು.ಸುಧಾ ಎನ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆ ಯ ಫಲಿತಾಂಶ:-
ಪ್ರಥಮ ಬಹುಮಾನ ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ,
ದ್ವಿತೀಯ ಬಹುಮಾನ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ, ಪೆರಾಜೆ, ಮಾಣಿ,
ತೃತೀಯ ಬಹುಮಾನ ಸತ್ಯಸಾಯಿ ಲೋಕ ಸೇವಾ ಪ್ರೌಡಶಾಲೆ ಅಳಿಕೆ ಪಡೆದಿದೆ.