ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ್ರೌಢಶಾಲೆಯಲ್ಲಿ ಖೋ-ಖೋ ಪಂದ್ಯಾಟ ಉದ್ಘಾಟನೆ
ಕೈಕಂಬ: ಸೆ. ೪ರಂದು ರೋಸಾ ಮಿಸ್ತಿಕಾ ಶಾಲಾ ಮೈದಾನದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಖೋ-ಖೋ ಪಂದ್ಯಾಟ ದ.ಕ.ಜಿ.ಪಂ. ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ರೋಸಾ ಮಿಸ್ತಿಕಾ ಅನುದಾನಿತ ಪ್ರೌಢಶಾಲೆ ಕಿನ್ನಿಕಂಬಳ ಇದರ ಆಶ್ರಯದಲ್ಲಿ ನಡೆಯಿತು.

ಖೋ-ಖೋ ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ಎನ್. ಮದಕ ವಿದ್ಯಾರ್ಥಿ ಜೀವನದ ದಿನಚರಿ ಮುಂದಿನ ದಿನಗಳಲ್ಲಿ ನೆನಪಿನಲ್ಲಿರುತ್ತದೆ,ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಯಾವತ್ತೂ ಕೈಚೆಲ್ಲಬಾರದು, ಶಿಕ್ಷಣ ಮತ್ತು ಕ್ರೀಡೆಯಿಂದ ಭವಿಷ್ಯ ರೂಪಿಸಲು ಸಾಧ್ಯವಿದ್ದು,ನೀವೆಲ್ಲರೂ ಪೋಷಕರಿಗೆ ಮತ್ತು ಶಾಲೆಗೆ ಕೀರ್ತಿ ತರುವ ಮಕ್ಕಳಾಗಿ ಎಂದರು.

ಮಂಗಳೂರು ಸೈಂಟ್ ಅಲೋಶಿಯಸ್ ಗೊನ್ಸಾಗ ಶಾಲೆಯ ಪ್ರಾಂಶುಪಾಲ ಫಾ. ಮೆಲ್ವಿನ್ ಅನಿಲ್ ಲೋಬೊ ಆಶೀರ್ವದಿಸುತ್ತ ಭಾರತದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ,ಪ್ರತಿಭೆಗಳಿಗೆ ಉತ್ತೇಜನ ನೀಡುವ ಕ್ರೀಡಾ ವಾತಾವರಣ ನಿರ್ಮಾಣವಾಗಬೇಕು,ಸ್ಪರ್ಧೆಯಲ್ಲಿ ಕ್ರೀಡಾ ಮನೋಭಾವವಿರಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ಗ್ರೇಸ್ ಮೋನಿಕಾ ಮಾತನಾಡಿ, ಪಂದ್ಯಾಟಗಳು ದೈಹಿಕ ಶಕ್ತಿಯ ಜೊತೆಗೆ ಆತ್ಮಶಕ್ತಿ ವೃದ್ಧಿಸುತ್ತದೆ,ಕ್ರೀಡೆಯಲ್ಲಿ ಬದ್ಧತೆ,ಶಿಸ್ತು,ನಿಯಮಗಳ ಪಾಲನೆ ಅವಶ್ಯ,ಸೋಲು ಗೆಲುವು ಇದ್ದರೂ,ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಮೆಲ್ವಿನ್ ಪೆರಿಸ್,ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಮ್ಯಾನೇಜರ್ ಸಿಸ್ಟರ್ ಲೀರಾ ಮರಿಯಾ,ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲ. ಜೆಫ್ರಿಯನ್ ಡಿ’ಸೋಜ,ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಉಷಾ,ಲ. ಮೆಲ್ವಿನ್ ಸಲ್ಡಾನ,ಲ. ರೋಶನ್ ಡಿ’ಸೋಜ,ದೈಹಿಕ ಶಿಕ್ಷಕರಾದ ಡೊನಾಲ್ಡ್, ಪ್ರಮೋದ್,ಸಿಸ್ಟರ್ ಸಾಧನಾ,ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್,ವೆಲೆರಿಯನ್ ಸಿಕ್ವೇರ,ಕವಿತಾ,ಐವನ್,ಗಾಡ್ವಿನ್ ತೌರೊ,ನೆಲ್ಸನ್,ವಿನ್ನಿ,ಚೇತನ್ ಪೆರಿಸ್,ಆಲ್ವಿನ್ ಪೆರಿಸ್,ಹೋಬಳಿ ಮಟ್ಟದ ಶಾಲಾ ಶಿಕ್ಷಕರು,ದೈಹಿಕ ಶಿಕ್ಷಣ ಶಿಕ್ಷಕರು,ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಲ. ಜೆಫ್ರಿಯನ್ ತಾವ್ರೊ ಹಾಗೂ ರೋಸಾ ಮಿಸ್ತಿಕ ಶಾಲಾ ದೈಹಿಕ ಶಿಕ್ಷಕ ಲ್ಯಾನ್ಸಿ ಸಿಕ್ವೇರ ಅವರನ್ನು ಅಭಿನಂದಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಲೊಲಿಟಾ ಪ್ರೇಮಾ ಪಿರೇರ ಸ್ವಾಗತಿಸಿ,ಮಂಗಳೂರು ದಕ್ಷಿಣ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ರವಿಶಂಕರ ನೀಲಾವರ ಪ್ರಾಸ್ತಾವಿಕ ಮಾತನ್ನಾಡಿ,ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ನಿರೂಪಿಸಿ,ರೋಸಾ ಮಿಸ್ತಿಕಾ ಶಾಲಾ ಶಿಕ್ಷಕ ಪ್ರವೀಣ್ ಕುಟ್ಹಿನೊ ವಂದಿಸಿದರು.

ತಾಲೂಕು ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಮಂಗಳೂರು,ಉಳ್ಳಾಲ ಮತ್ತು ಗುರುಪುರ ಹೋಬಳಿಯ ತಲಾ ೮ ಪ್ರೌಢ ಶಾಲೆಗಳ ಸಹಿತ ಒಟ್ಟು ೨೪ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.