ಬಡಗಬೆಳ್ಳೂರು ಗೌರವ ಶಿಕ್ಷಕರಿಗೆ ಹಳೆ ವಿದ್ಯಾರ್ಥಿ ಸಂಘದಿಂದ ಹೆಚ್ಚುವರಿ ವೇತನ ಹಸ್ತಾಂತರ
ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಐವರು ಗೌರವ ಶಿಕ್ಷಕರಿಗೆ ಹಳೆ ವಿದ್ಯಾರ್ಥಿ ಸಂಘ ನೀಡಿದ ಹೆಚ್ಚುವರಿ ವೇತನದ ಮೊತ್ತವನ್ನು ಸೋಮವಾರ ಶಿಕ್ಷಕಿಯರಿಗೆ ಹಸ್ತಾಂತರಿತು.
ಪ್ರಸ್ತುತ ಶಾಲೆಯಲ್ಲಿ ೧೦೯ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು, ಸರಕಾರದ ವತಿಯಿಂದ ಒರ್ವ ಶಿಕ್ಷಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಜ್ಞಾನ ಕೊರತೆಯಾಗಬಾರದು ಎಂಬ ಮಹತ್ವಕಾಂಕ್ಷೆಯೊಂದಿಗೆ ಊರಿನವರ ಶಾಲಾಭಿವೃದ್ಧಿ ಸಮಿತಿಯ ಮೂಲಕ ಕಳೆದ ಒಂದು ದಶಕದಿಂದ ನಾಲ್ವರು ಗೌರವ ಶಿಕ್ಷಕರನ್ನು ನೇಮಿಸಿ, ಅವರಿಗೆ ವೇತನವನ್ನು ಊರ ಹಾಗೂ ಪರವೂರಿನ ದಾನಿಗಳ ಸಹಾಯದಿಂದ ಅವರಿಗೆ ಕನಿಷ್ಠ ವೇತನ ನೀಡಲಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ವೇತನ ನೀಡಬೇಕು ಎಂಬ ಉದ್ದೇಶದಿಂದ ಹೆಚ್ಚುವರಿ ವೇತನ ಜವಾಬ್ದಾರಿಯನ್ನು ಹಳೆ ವಿದ್ಯಾರ್ಥಿ ಸಂಘವು ವಹಿಸಿಕೊಂಡಿತ್ತು. ಆ ಪ್ರಯುಕ್ತ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಬ್ಯಾಕ್ ಲಾಗ್ ವೇತನದ ಚೆಕ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಗುಂಡಾಲ, ಹಿರಿಯರಾದ ಪರಕೂರು ರಮೇಶಚಂದ್ರ ಭಂಡಾರಿ, ಸಂಚಾಲಕರಾದ ನರೇಂದ್ರನಾಥ ಭಂಡಾರಿ, ಸಚೀಂದ್ರನಾಥ ರೈ, ರವೀಂದ್ರ ಮೇಲಾಂಟ, ಗಣೇಶ ಭಂಡಾರಿ ನಲಿಮಾರ್, ಗುಣಪಾಲ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಕೇಶವ ನಾಯ್ಕ್, ನಿವೃತ್ತ ಶಿಕ್ಷಕರಾದ ಸಂಕಪ್ಪ ಶೆಟ್ಟಿ, ಗಂಗಾಧರ ರೈ , ಸಾಕೇತ್ ಭಂಡಾರಿ ಹಾಗೂ ಹಳೆವಿದ್ಯಾರ್ಥಿಸಂಘದ ಸದಸ್ಯರು ಉಪಸ್ಥಿತರಿದ್ದರು.