Published On: Sat, Aug 26th, 2023

ಇಂಧನ ಶಕ್ತಿಯ ಕ್ಷೇತ್ರದಲ್ಲಿ ವಿಫುಲ‌ ಅವಕಾಶ: ಭಗವಂತ ಖೂಬಾ

ಕೈಕಂಬ:ಮುನ್ಸಿಪಾಲ್ಟಿಯ ತ್ಯಾಜ್ಯಕ್ಕೆ ಇಲ್ಲಿ ಬಂಗಾರದ ರೂಪ‌ ನೀಡಲಾಗಿದೆ.ಇಂಧನ ಶಕ್ತಿಯ ಕ್ಷೇತ್ರದಲ್ಲಿ ಸಾಕಷ್ಟು ವಿಫುಲ‌ ಅವಕಾಶವಿದ್ದು, ರೈತರು, ಯುವ ಮನಸ್ಸುಗಳು ಈ ನಿಟ್ಟಿನಲ್ಲಿ‌‌ ಗಮನಹರಿಸಬೇಕು ಇದಕ್ಕೆ ಭಾರತ ಸರಕಾರ ಕೂಡ ಸರ್ವರೀತಿಯ ಬೆಂಬಲ ನೀಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವರಾದ ಭಗವಂತ ಖೂಬಾ ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗಂಜಿಮಠದಲ್ಲಿರುವ ಒಡ್ಡೂರು ಫಾರ್ಮ್ ನಲ್ಲಿ 3 ಕೋ.ರೂ.ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ದ.ಕ.ಜಿಲ್ಲೆಯ ಮೊದಲ ಕೊಳೆಯುವ ಹಸಿ ಕಸಗಳು ಹಾಗು ದ್ರವ ತ್ಯಾಜ್ಯ ಬಳಸಿ ಅನಿಲ ಉತ್ಪಾದಿಸುವ ಬಯೋ ಸಿ ಏನ್ ಜಿ ಘಟಕವನ್ನು  ಶುಕ್ರವಾರ ಸಂಜೆ  ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.


ಸರ್ಕಾರ ಎಷ್ಟೇ ಸವಲತ್ತು‌ ನೀಡಿದರೂ ಉದ್ಯಮಿಗಳಲ್ಲಿ ಉತ್ಸಾಹ ಇಲ್ಲದೇ ಇದ್ದರೆ ಯಶಸ್ವಿ ಉದ್ಯಮಿಯಾಗಲು ಸಾಧ್ಯವಿಲ್ಲ,
ಉದ್ಯಮವನ್ನು ಸವಾಲಾಗಿ ಸ್ವೀಕರಿಸಿ  ಯೋಜನೆ ಯನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಬೇಕಾದರೆ ಎದೆಗಾರಿಕೆ ಬೇಕು.ಶಾಸಕ ರಾಜೇಶ್ ನಾಯ್ಕ್ ಮತ್ತು ಅವರ ಮಗ ಉನ್ನತ್ ನಾಯ್ಕ್ ಈ ಸಾಹಸ ಮಾಡಿದ್ದಾರೆ ಎಂದರು.


ಹವಮಾನ ಬದಲಾವಣೆ,  ಆಹಾರ ಭದ್ರತೆ ಹಾಗೂ ಇಂಧನ ಕೊರತೆ ಇಂದು ದೊಡ್ಡ ಸವಾಲಾಗಿದೆ.ಮಾನವನ ಅನಿಯಮಿತ ಬಳಕೆಯಿಂದಾಗಿ ವಾತಾವರಣದಲ್ಲಿ ಏರುಪೇರಾಗಿದ್ದು, ದುಷ್ಪರಿಣಾಮಗಳನ್ನು ಎಲ್ಲೆಡೆ ಎದುರಿಸುವಂತಾಗಿದೆ ಎಂದ ಸಚಿವರು   ನವೀಕರಿಸಬಹುದಾದ ಇಂಧನಗಳ ಕಡೆಗೆ ಹೆಚ್ಚು‌ ಒತ್ತು ನೀಡಲಾಗುತ್ತಿದ್ದು, ಇದು ಮಾತ್ರ ಎಲ್ಲ ಸಮಸ್ಯೆಗೂ ಪರಿಹಾರ ಎಂದರು.


ಹಸಿರು ಶಕ್ತಿಯ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕರೆ ನೀಡಿದ್ದು, ಹಂತಹಂತವಾಗಿ ಅನುಷ್ಠಾನವಾಗುತ್ತಿದೆ ಸಚಿವ ಖೂಬಾ ಎಂದರು.ಪುತ್ತೂರು ಶ್ರೀವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ‌ ಅವರು ಘಟಕವನ್ನು ದೀಪ ಪ್ರಜ್ವಲನಗೈದು ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು,ರಾಜೇಶ್ ನಾಯಕ್ ರವರು ನಡೆಸಿರುವ ಈ ಕಾರ್ಯ ನಮಗೆಲ್ಲರಿಗೂ ಹೆಮ್ಮೆ. ಇದು ದೇಶದ ಎರಡನೇ ರಾಜ್ಯದ ಮೊದಲ ಘಟಕವಾಗಿದೆ. ಹಳ್ಳಿಯ ಕೃಷಿಕ ಕೃಷಿಗೆ ಒಳಿತಾಗುವುದರ ಜೊತೆಗೆ ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಿದ್ದಾರೆ. ಯಾವುದು ತ್ಯಾಜ್ಯ ಎನ್ನುವಂತದಿಲ್ಲ. ಪ್ರಕೃತಿಯಲ್ಲಿ ಪುನರ್ ನವೀಕರಣಗೊಂಡು ಪ್ರೇರಣೆ ಕೊಡುವ ಕಾರ್ಯ ಆಗಲಿ.‌ ನಾಲ್ಕು ಪಂಚಾಯತುಗಳು ಸೇರಿ ಇಂತಹ ಘಟಕ ಸ್ಥಾಪಿಸಿದಲ್ಲಿವಿಷ ಮುಕ್ತ ದೇಶ ನಿರ್ಮಾಣವಾಗಲಿದೆ ಎಂದರು.


ಅತಿಥಿಯಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಸರ್ಕಾರ ಮಾಡಬೇಕಾದ ಯೋಜನೆ ಇಲ್ಲಿ ಆಗಿದ್ದು ಸರಕಾರಕ್ಕೆ ಪ್ರೇರಣೆ ಕೊಡುವ ಕಾರ್ಯ ಆಗಿದೆ. ಪ್ರಕೃತಿಗೆ ಪೂರಕವಾದಂತಹ, ಮಾದರಿ ಘಟಕವನ್ನು ಮಾಡಿದ್ದು ಬಂಟ್ವಾಳದ ತ್ಯಾಜ್ಯದ ಸಮಸ್ಯೆ ಬಗೆಹರಿಯಲಿದೆ. ಆತ್ಮನಿರ್ಭರ ಯೋಜನೆಯಡಿ ಮೋದಿಯವರ ಕಲ್ಪನೆಯನ್ನು ರಾಜೇಶ್ ನಾಯ್ಕ್ ಅನುಷ್ಢಾನಗೊಳಿಸಿದ್ದಾರೆ ಎಂದರು.


ಮಂಗಳೂರು ಉತ್ತರ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಶುಭ ಹಾರೈಸಿದರು. ಶಾಸಕರಾದ ಉಮಾನಾಥ ಕೋಟ್ಯಾನ್ ,ಯಶುಪಾಲ್ ಸುವರ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್,
ಬಯೋಸಿಎನ್ ಜಿಯ ನೋಡಲ್ ಅಧಿಕಾರಿ ಕುಮಾರ್ ಗೌಡ,,ಮಾಜಿ ಶಾಸಕರಾದ ರುಕ್ಮಯಪೂಜಾರಿ,ಪದ್ಮನಾಭಕೊಟ್ಟಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.,ಮಾಜಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು,ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ,ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ಸಹಿತ ಹಲವಾರು ಗಣ್ಯರು  ಭಾಗವಹಿಸಿದರು.


ರಿಟ್ಯಾಪ್ ಸೊಲ್ಯುಷನ್  ಆಡಳಿತ ನಿರ್ದೇಶಕ ಪ್ರಶಾಂತ್ ಲಕ್ಷ್ಮಣ ದೇವಾಡಿಗ ಅವರು ಘಟಕದ ಬಗ್ಗೆ ಮಾಹಿತಿ ನೀಡಿದರು.
ಶಾಸಕ ರಾಜೇಶ್ ನಾಯ್ಕ್  ಅವರ ಪತ್ನಿ ಉಷಾ ಆರ್ .ನಾಯ್ಕ್ ಉಪಸ್ಥಿತರಿದ್ದರು.ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಪ್ರಸ್ತಾವಿಸಿ, ಸ್ವಾಗತಿಸಿದರು. ಒಡ್ಡೂರು ಎನರ್ಜಿ ಘಟಕದ ಆಡಳಿತ ಪಾಲುದಾರ ಉನ್ನತ್ ಆರ್  ನಾಯ್ಕ್ ವಂದಿಸಿದರು.ಬೂಡಾ ಮಾಜಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter