ಪೊರ್ಕೋಡಿ ವೃದ್ಧಾಶ್ರಮದಲ್ಲಿ ಗುರುಪುರ ದಂಪತಿಯ
ವಿವಾಹ ವಾರ್ಷಿಕೋತ್ಸವ ; ವೃದ್ಧರಿಗೆ ಊಟೋಪಚಾರ
ಕೈಕಂಬ : ಬಜ್ಪೆ ಪೊರ್ಕೋಡಿಯ ವೃದ್ಧಾಶ್ರಮ `ನಮ್ಮ ಹಿರಿಯರ ಮನೆ’ಯ ವೃದ್ಧರಿಗೆ ಆ. ೨೨ರಂದು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ ಗುರುಪುರ ಬಡಕರೆಯ ವಸಂತ್ ಜೆ. ಕೋಟ್ಯಾನ್ ಮತ್ತು ಸುಮತಿ ವಿ. ಕೋಟ್ಯಾನ್ ದಂಪತಿಯು ವೃದ್ಧಾಶ್ರಮದಲ್ಲೇ ತಮ್ಮ ವಿವಾಹದ ಒಂದನೇ ವಾರ್ಷಿಕೋತ್ಸವ ಆಚರಿಸಿ, ಸಮಾಜಕ್ಕೆ ಮಾದರಿಯಾದರು.

ವಸಂತ್ ಅವರು ಮಂಗಳೂರಿನ ಹೋಟೆಲೊಂದರಲ್ಲಿ ಕ್ಯಾಶಿಯರ್ ಆಗಿದ್ದು, ಕಳೆದ ವರ್ಷ ಆ. ೨೧ರಂದು ಸುಮತಿಯರೊಂದಿಗೆ ವಿವಾಹಿತರಾಗಿದ್ದರು. “ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಎಂದುಕೊಂಡು ಅದ್ದೂರಿ ಔತಣಕೂಟ, ದುಂದುವೆಚ್ಚ ಮಾಡುವ ಬದಲಾಗಿ ಸಮಾಜದಲ್ಲಿ ಹಸಿದವರಿಗೆ ಅಥವಾ ಅನ್ನಕ್ಕಾಗಿ ಹಾತೊರೆಯುವ ಮಂದಿಗೆ ದಾನ ಮಾಡುವುದು ಉತ್ತಮ ಎಂಬಂತೆ ನಡೆದುಕೊಂಡಿದ್ದೇನೆ. ವೃದ್ಧರ ಮುಖದಲ್ಲಿನ ನಗು ಮರೆಯಲಾರದ ಕ್ಷಣವಾಗಿ ಪರಿಣಮಿಸಿದೆ” ಎಂದು ವಸಂತ್ ಹೇಳಿದರು.

ಮೂಲ್ಕಿ-ಮೂಡಬಿದ್ರೆ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ರಾಜೇಶ್ ಅಮೀನ್(ಆರ್‌ಕೆ), ಉದ್ಯಮಿ ಯಶವಂತ ಕೋಟ್ಯಾನ್ ಮರಂಕರಿಯ, ಸಂಸ್ಥೆಯ ಸಿಬ್ಬಂದಿ ರೇಖಾ, ರಾಕೇಶ್ ಹಾಗೂ ಸುಮಾರು ೪೦ರಷ್ಟು ವೃದ್ಧರು ಇಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ನಮ್ಮ ಹಿರಿಯರ ಮನೆ :
ಬೆಂಗಳೂರಿನ ಸ್ನೇಹ ಭಾರತಿ' ವಿದ್ಯಾ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಮತ್ತು ಕಾರ್ಯದರ್ಶಿ ಪ್ರತಿಮಾ ಗೋಪಾಲ್ ರಾವ್ ಅವರು ಪೊರ್ಕೋಡಿಯನಮ್ಮ ಹಿರಿಯರ ಮನೆ’ ನಿರ್ವಹಿಸುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಸ್ಥಾಪನೆಯಾದ ಈ ಮನೆ ಸಂಪೂರ್ಣ ಉಚಿತವಾಗಿದೆ.
ಇಲ್ಲಿ ಈಗ ೬೦ ವರ್ಷ ದಾಟಿದ ೪೦ ವೃದ್ಧರಿದ್ದಾರೆ. ಸ್ಥಳೀಯರೇ ಹೆಚ್ಚಿರುವ ಮನೆಯಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಜಾಸ್ತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಚಿತವಾಗಿ ನಿರ್ವಹಿಸುತ್ತಿರುವ ಏಕೈಕ ವೃದ್ಧಾಶ್ರಮ ಇದಾಗಿದೆ. ಉಳ್ಳವರು ಇಲ್ಲಿಗೆ ಅಕ್ಕಿ, ದವಸ-ಧಾನ್ಯ ದಾನ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ರೇಖಾ(೭೯೭೫೮೦೪೮೨೦) ಮತ್ತು ರಾಕೇಶ್(೭೩೫೩೨೮೧೮೪೧) ಅಥವಾ ೯೧೧೩೫೦೫೦೨೦ ಈ ಸಂಖ್ಯೆ ಸಂಪರ್ಕಿಸಬಹುದು.



