ಸೆ. ೯ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಲ್ಲವ
ಸಹಿತ ಅತಿ ಹಿಂದುಳಿದ ಸಮಾಜದ ಬೃಹತ್ ಸಮಾವೇಶ
ಕೈಕಂಬ: ಸ್ವತಂತ್ರ ಭಾರತದಲ್ಲಿ ಸಂವಿದಾನವು ಸರ್ವರಿಗೂ ಸಮಪಾಲು-ಸಮಪಾಳು ಖಾತರಿ ಮಾಡಿದ್ದರೂ, ಬಹುಪಾಲು ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳಿಗೆ ಈಗಲೂ ಇದು ಕನಸಾಗಿದೆ. ರಾಜ್ಯದ ಬಿಲ್ಲವ, ಈಡಿಗ, ದೀವರು, ನಾಮಧಾರಿ, ಮಡಿವಾಳ, ವಿಶ್ವಕರ್ಮ, ಅಲೆಮಾರಿ, ಅರೆ ಅಲೆಮಾರಿ, ಬೆಸ್ತ, ತಿಗಳ, ಕ್ಷೌರಿಕ, ದೇವಾಂಗ, ಗೊಲ್ಲ, ಯಾದವ, ಉಪ್ಪಾರ, ಹಾಲಕ್ಕಿ ಒಕ್ಕಲಿಗ, ಮೇದಾರ, ಕುಂಬಾರ, ಗೆಜ್ಜೆಗಾರ ಸಹಿತ ನಾನಾ ಹೆಸರಿನಲ್ಲಿ ಗುರುತಿಸಿಕೊಂಡಿರುವ ಜಾತಿಗಳ ಸುಮಾರು ಒಂದು ಕೋಟಿಗೂ ಅಧಿಕ ಜನರು ಈಗಲೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಾನಮಾನಗಳಿಂದ ವಂಚಿತವಾಗಿದ್ದಾರೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಕೇಂದ್ರದ ಡಾ. ಶ್ರೀ ಪ್ರಣವಾನಂದ ಸ್ವಾಮಿ ಅವರು ಹೇಳಿದರು.

ಮಂಗಳೂರಿನ ಪತ್ರಿಕಾ ಭವನದಲ್ಲಿ ಆ. ೨೨ರಂದು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅತಿ ಹಿಂದುಳಿದ ಸಮಾಜಕ್ಕೆ ಎಲ್ಲ ರೀತಿಯಲ್ಲೂ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ರಾಜಕೀಯದಲ್ಲಿರುವ ನಮ್ಮ ಸಮಾಜದ ಹಿರಿಯರ ಸಹಿತ ಮೂಲ ಕಾಂಗ್ರೆಸ್ಸಿಗರನ್ನು ಪಕ್ಷಕ್ಕೆ ಹೊರಗಿನಿಂದ ಬಂದವರು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈಗ ನಮ್ಮ ಸಮಾಜದಲ್ಲಿ ರಾಜಕೀಯ ಅರಿವು ಮೂಡಿಸಿ, ನಮ್ಮ ಹಕ್ಕಿಗಾಗಿ ಹೋರಾಡುವ ಅವಶ್ಯಕತೆ ಇದೆ ಎಂದರು.

ಸೆ. ೯ಕ್ಕೆ ಬೃಹತ್ ಸಮಾವೇಶ :
ಅತಿ ಹಿಂದುಳಿದ ಜಾತಿಗಳ ನಡುವೆ ಪರಸ್ಪರ ಸಂವಾದ ಮತ್ತು ಪರಸ್ಪರ ಕೊಡುಕೊಳ್ಳುವಿಕೆಯ ಚರ್ಚೆಗಳು ಆಗಬೇಕು. ಎಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ ೯ರಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ ೩ನ `ವೈಟ್ ಪೆಟಲ್ಸ್’ ಇಲ್ಲಿ ಅತಿ ಹಿಂದುಳಿದ ಎಲ್ಲ ಸಮುದಾಯದ ಸ್ವಾಮಿಗಳು, ರಾಜಕೀಯ ನಾಯಕರ ಪಾಲ್ಗೊಳ್ಳುವಿಕೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದ ಮೂಲಕ ಸರ್ಕಾರಗಳ ಕಣ್ತೆರೆಸುವ ಕೆಲಸವಾಗಲಿದೆ. ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಸ್ವಾಮೀಜಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ(ರಿ) ಜಿಲ್ಲಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಜಿಲ್ಲಾಧ್ಯಕ್ಷ ಸುರೇಶ್‌ಚಂದ್ರ ಕೋಟ್ಯಾನ್, ಕೋಶಾಧಿಕಾರಿ ಲೋಕನಾಥ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಪ್ರೇಮನಾಥ, ಮಹಿಳಾ ಕಾರ್ಯದರ್ಶಿ ಶೋಭಾ ಕೇಶವ್ ಮತ್ತು ನಿತಿನ್ ಜಿ. ಪೂಜಾರಿ ಉಪಸ್ಥಿತರಿದ್ದರು.