ಬಂಟವಾಳ ರೈಲ್ವೇ ನಿಲ್ದಾಣ ಅಭಿವೃದ್ದಿಗೆ 26.18 ಕೋಟಿ ರೂ.ಅನುದಾನ ಬಿಡುಗಡೆ:ಅತೀ ಶೀಘ್ರ ಕಾಮಗಾರಿ ಆರಂಭ: ಸಂಸದ ನಳಿನ್
ಬಂಟ್ವಾಳ:ಅಮೃತ್ ಭಾರತ್ ಯೋಜನೆಯಡಿ ಬಿ.ಸಿ.ರೋಡಿನ ಗೂಡಿನಬಳಿರುವ ಬಂಟವಾಳ ರೈಲ್ವೇ ನಿಲ್ದಾಣವನ್ನು ಸುಸಜ್ಜಿತವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ 26.18 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು,ಅತೀ ಶೀಘ್ರದಲ್ಲೇ ಕಾಮಗಾರಿಯು ಆರಂಭವಾಗಲಿದೆ ಎಂದ ಸಂಸದ ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ ಬಿ.ಸಿ.ರೋಡಿನಲ್ಲಿರುವ ಬಂಟವಾಳ ರೈಲ್ವೆ ನಿಲ್ದಾಣಕ್ಕೆ ಬೇಟಿ ನೀಡಿ ನೂತನ ರೈಲ್ವೇ ನಿಲ್ದಾಣದ ನೀಲನಕಾಶೆಯನ್ನು ವೀಕ್ಷಿಸಿ,ರೈಲ್ವೇ ಅಧಿಕಾರಿಗಳೊಂದಿಗೆ ಕಾಮಗಾರಿಯ ಬಗ್ಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಬೇಡಿಕೆಯಂತೆ ದ.ಕ. ಜಿಲ್ಲೆಯ ಮೂರು ರೈಲ್ವೇ ನಿಲ್ದಾಣಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಅನುದಾನ ಮಂಜೂರು ಮಾಡಿದ್ದು ಇದಕ್ಕಾಗಿ ಪ್ರಧಾನಿ ನರೇಂದ್ರಮೋದಿ ಹಾಗೂ ರೈಲ್ವೇ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಅವರು ಈಗಾಗಲೇ ಮಂಗಳೂರಿನ ರೈಲ್ವೇ ನಿಲ್ದಾಣದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈಗಾಗಲೇ ಪ್ರಧಾನಿಯವರು ಶಿಲ್ಯಾನ್ಯಾಸ ನೆರವೇರಿಸಿದ್ದಾರೆ.ಬಂಟವಾಳದ ರೈಲ್ವೇ ನಿಲ್ದಾಣದ ಅಭಿವೃದ್ಧಿಗೆ 26.18 ಕೋಟಿ ರೂ. ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ ಎಂದರು.
ನೂತನ ರೈಲ್ವೇ ನಿಲ್ದಾಣದ ಮಾಸ್ಟರ್ ಪ್ಲಾನ್ ಕೂಡ ತಯಾರಾಗಿದ್ದು,ಈ ನಿಲ್ದಾಣ ಸಂಪೂರ್ಣವಾಗಿ ಹೊಸದಾಗಿ ಪರಿವರ್ತನೆಗೊಂಡು, ಮೂಲಭೂತ ಸೌಕರ್ಯ, ಶುಚಿತ್ವಕ್ಕೆ ಆದ್ಯತೆ ನೀಡಿ ಜನರ ಇಚ್ಛೆಯಂತೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗತ್ತದೆ ಎಂದು ಸಂಸದರು ಹೇಳಿದರು.
90 ಕಿ.ಮೀ. ವಿದ್ಯುದೀಕರಣ ಕೆಲಸ ಬಾಕಿ ಇದೆ. ಅದಾದ ಬಳಿಕ 2024ರೊಳಗೆ ಈ ಭಾಗದಲ್ಲಿ ವಂದೇ ಭಾರತ್ ರೈಲು ಓಡಲಿದೆ ಎಂದು ಹೇಳಿದ ನಳಿನ್, ಈಗಾಗಲೇ ಅಂಡರ್ ಪಾಸ್ ಗಳ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಮಂಗಳೂರು ಸುಬ್ರಹ್ಮಣ್ಯದವರೆಗೆ ರೈಲ್ವೆ ನಿಲ್ದಾಣಗಳು, ರೈಲ್ವೆ ಮಾರ್ಗ ಹಾಗೂ ಸಂಚರಿಸುವ ರೈಲುಗಳ ವೇಳಾಪಟ್ಟಿಯನ್ನು ಅನುಕೂಲಕರ ರೀತಿಯಲ್ಲಿ ಮಾರ್ಪಡಿಸುವ ಕುರಿತು ಚರ್ಚಿಸಲಾಗುವುದು ಎಂದರು.
ಕೈಕುಂಜೆ ರಸ್ತೆ ಅಭಿವೃದ್ಧಿ: ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಕೈಕುಂಜೆ ರಸ್ತೆಯನ್ನು ಪ್ರಯಾಣಿಕಯೋಗ್ಯವನ್ನಾಗಿಸುವ ಕುರಿತು ಶಾಸಕ ರಾಜೇಶ್ ನಾಯ್ಕ್ ಸಹಕಾರದಿಂದ ಅಭಿವೃದ್ಧಿಪಡಿಸಲಾಗುವುದು. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ನಳಿನ್ ಹೇಳಿದರು.
ಬಂಟ್ವಾಳ ಶಾಸಕರಾಜೇಶ್ ನಾಯ್ಕ್ ಅವರು ಬಂಟ್ವಾಳದ ರೈಲ್ವೇ ಸಮಸ್ಯೆಗಳಿಗೆ ಕೇಂದ್ರದಿಂದ ಆಗಬೇಕಾದ ಪರಿಹಾರಗಳನ್ನು ಮಾಡಿಕೊಡುವಂತೆ ಮನವಿ ಮಾಡಿದ್ದರು.ಅದರಂತೆ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಆದ್ಯತೆಯ ಮೇಲೆ ಕೇಂದ್ರದ ಮೂಲಕ ಅನುದಾನವನ್ನು ಒದಗಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.
ಸುಸಜ್ಜಿತ ರೈಲ್ವೆ ನಿಲ್ದಾಣ: ಅಧಿಕಾರಿಯಿಂದ ಮಾಹಿತಿ .ಎ.ಸಿ. ಕೋಣೆಗಳು, ಸುಸಜ್ಜಿತ ವ್ಯವಸ್ಥೆ ರೈಲ್ವೆ ನಿಲ್ದಾಣ ಅಭಿವೃದ್ಧಿ ಕುರಿತು ಮಾಹಿತಿ ನೀಡಿದ ಡೆಪ್ಯುಟಿ ಚೀಫ್ ಇಂಜಿನಿಯರ್ ರಾಮಸುಬ್ಬಯ್ಯ ರೆಡ್ಡಿ, ಇಡೀ ನಿಲ್ದಾಣವನ್ನು ಪುನರ್ ರೂಪಿಸಲಾಗುವುದು. ಇದರಲ್ಲಿ ಪ್ಲಾಟ್ ಫಾರ್ಮ್ ನ ಛಾವಣಿ, ಸುಲಭ್ ಶೌಚಾಲಯ, ಪಾರ್ಕಿಂಗ್ ಬೂತ್, ಪ್ರೀಪೈಯ್ಡ್ ಟ್ಯಾಕ್ಸಿ, ಪ್ಲಾಟ್ ಫಾರ್ಮ್ ಶೆಲ್ಟರ್, ವೈಫೈ ಸೌಲಭ್ಯ, ಆಟೊ ಪಾರ್ಕಿಂಗ್, ಸಿಸಿಟಿವಿ, ಕೋಚ್ ಮಾಹಿತಿ ನೀಡುವ ಬೋರ್ಡ್, ವಿದ್ಯುದ್ದೀಪ, ಹವಾನಿಯಂತ್ರಿತ ಪ್ರಯಾಣಿಕರ ಕೊಠಡಿ,ಕ್ಯಾಂಟೀನ್ ಸಹಿತ ರೈಲ್ವೆ ನಿಯಮಾವಳಿಗಳ ಪ್ರಕಾರ ಸುಸಜ್ಜಿತವಾಗಿ ನಿಲ್ದಾಣವನ್ನು ರೂಪಿಸಲಾಗುವುದು ಸುಮಾರು ಒಂದು ವರ್ಷದ ಅವಧಿಯಲ್ಲಿ ಈ ನಿಲ್ದಾಣ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದರು.
ಕಟ್ಟಡದ ಮುಂಭಾಗದಲ್ಲಿ ಗ್ರಾನೈಟ್ ಹಾಕಿ ಸ್ಚಚ್ಚ ಮಾಡಲಾಗುತ್ತದೆ.ಒಂದು ಪ್ಲಾಟ್ ಫಾರಂ ನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗಲು ಲಿಪ್ಟ್ ಹಾಗೂ ಎಕ್ಸೀಲೇಟರ್ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.
ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ದೇವಪ್ಪ ಪೂಜಾರಿ,ಸುಲೋಚನ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ ಬಂಟ್ವಾಳ, ರವೀಶ್ ಶೆಟ್ಟಿ ಕರ್ಕಳ,ರಾಮದಾಸ್ ಬಂಟ್ವಾಳ, ಸುದರ್ಶನ ಬಜ,ಗೋವಿಂದ ಪ್ರಭು,ಪುರುಷೋತ್ತಮ ಶೆಟ್ಟಿ ವಾಮದಪದವು,ಉದಯ ಕುಮಾರ್ ಕಾಂಜಿಲ,ಗಣೇಶ್ ರೈ ಮಾಣಿ,ವಜ್ರನಾಭ ಕಲ್ಲಡ್ಕ,ಸಂದೇಶ್ ಶೆಟ್ಟಿ,ಕೃಷ್ಣಪ್ಪ ಪೂಜಾರಿ ದೋಟ,ರೈಲ್ವೇ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಾವನ್ ಕುಮಾರ್ ಹಾಗೂ ಡೆಪ್ಯೂಟಿ ಅಪರೇಷನ್ ಮ್ಯಾನೇಜರ್ ಸರವಣ ಮೊದಲಾದವರಿದ್ದರು.