ಬಂಟ್ವಾಳ: ವಕೀಲರ ಸಂಘದಿಂದ’ಕೆಸರ‍್ದ ಕಂಡೊಡ್ ಕುಸಲ್ದ ಗೊಬ್ಬು’ ಆಟಿ ಆಚರಣೆಯಿಂದ ತುಳುನಾಡಿನ ಸಂಸ್ಕೃತಿ ಅನಾವರಣ: ನ್ಯಾಯಾಧೀಶೆ ಭಾಗ್ಯಮ್ಮ
ಬಂಟ್ವಾಳ:ತುಳುನಾಡಿನ ಕೃಷಿಕರ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಜೊತೆಗೆ ಇಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಬಗ್ಗೆ ಅರಿತುಕೊಳ್ಳಲು ವೈಶಿಷ್ಟ್ಯ ಪೂರ್ಣ ‘ಆಟಿ ತಿಂಗಳ ಆಚರಣೆ’ ಕೂಡಾ ಸಹಕಾರಿಯಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ಹೇಳಿದ್ದಾರೆ.

ಇಲ್ಲಿನ ವಕೀಲರ ಸಂಘದ ವತಿಯಿಂದ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣ ಬಳಿ ಗುರುವಾರ ಏರ್ಪಡಿಸಿದ್ದ ೪ನೇ ವರ್ಷದ ‘ಆಟಿಡೊಂಜಿ ದಿನತ ತಮ್ಮನದ ಲೇಸ್, ಕೆರ‍್ದ ಕಂಡೊಡ್ ಕುಸಲ್ದ ಗೊಬ್ಬು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತುಳು ಜಾನಪದ ವಿದ್ವಾಂಸ ಕೆ.ಕೆ.ಪೇಜಾವರ ಮಾತನಾಡಿ, ‘ಈ ಹಿಂದೆ ತುಳುನಾಡಿನಲ್ಲಿ ಅಕ್ಷರ ಜ್ಞಾನ ಹೊಂದಿರದ ಕೃಷಿಕರು ಕೂಡಾ ವೈಜ್ಞಾನಿಕ ಮತ್ತು ಆರೋಗ್ಯಪೂರ್ಣ ಆಹಾರ ಮತ್ತು ಔಷಧೀಯ ಪದ್ಧತಿ ಅರಿತಿದ್ದರು. ಈ ಅರ್ಥಪೂರ್ಣ ಆಚರಣೆ ಬಗ್ಗೆ ಯುವಜನತೆಗೆ ತಿಳಿಸುವ ಅಗತ್ಯವಿದೆ’ ಎಂದರು.
ಸಂಘದ ಅಧ್ಯಕ್ಷ ರಿಚಾರ್ಡ್ ಡಿಕೋಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೃಷ್ಣಮೂರ್ತಿ ಎನ್., ಹಿರಿಯ ವಕೀಲ ರಾಮಣ್ಣ ಗೌಡ ಶುಭ ಹಾರೈಸಿದರು.ಇದೇ ವೇಳೆ ತುಳುನಾಡಿನ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಆಟಿ ತಿಂಗಳ ಆಹಾರ ಸಹ ಭೋಜನ, ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆ ನಡೆಯಿತು.
ಹಿರಿಯ ವಕೀಲ ಜಯರಾಮ ರೈ ಸ್ವಾಗತಿಸಿ, ವಕೀಲೆ ಉಮಾ ಸೋಮಯಾಜಿ ವಂದಿಸಿದರು. ವಕೀಲ ನಿತಿನ್, ಸುಂದರ, ದೀಪಕ್ ಕಾರ್ಯಕ್ರನಿರೂಪಿಸಿದರು.