ಬಡಗಕಜೆಕಾರು: ಕರ್ತವ್ಯದಲ್ಲಿ ಇರುವಾಗಲೇ ಅಂಗನವಾಡಿ ಸಹಾಯಕಿ ಸಾವು ಸೂಕ್ತ ಪರಿಹಾರಕ್ಕೆ ಆಗ್ರಹ, ಹೋಟೆಲ್ ವೃತ್ತಿ ತೊರೆದ ಪತಿ ಕಂಗಾಲು
ಬಂಟ್ವಾಳ:ಇಲ್ಲಿನ ಬಡಗ ಕಜೆಕಾರು ಗ್ರಾಮದ ಕೆದಿನಡಿ ಸಮೀಪದ ಬ್ಯಾರಿಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯದಲ್ಲಿ ಇರುವಾಗಲೇ ಕುಸಿದು ಬಿದ್ದು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಸಹಾಯಕಿ ವಸಂತಿ ನಾಯ್ಕ್(೪೩) ಇವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಇದೇ ತಿಂಗಳ ೨ರಂದು ಮಧ್ಯಾಹ್ನ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯದಲ್ಲಿ ಇರುವಾಗಲೇ ಅಂಗನವಾಡಿ ಸಹಾಯಕಿ ವಸಂತಿ ನಾಯ್ಕ್ ರಕ್ತದ ಒತ್ತಡ ಪರಿಣಾಮ ಕುಸಿದು ಬಿದ್ದಿದ್ದರು. ಇವರನ್ನು ಕೂಡಲೇ ಮಂಗಳೂರು ಪಡೀಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕಳೆದ ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಇದರಿಂದಾಗಿ ಮಂಗಳೂರು ಹೋಟೆಲೊಂದರಲ್ಲಿ ದುಡಿಯುತ್ತಿದ್ದ ಇವರ ಪತಿ ನಾರಾಯಣ ನಾಯ್ಕ್ ಕೆಲಸ ತೊರೆದಿದ್ದರೆ, ಕಾಲೇಜಿನಲ್ಲಿ ಓದುತ್ತಿರುವ ಪುತ್ರ ಮತ್ತು ಪುತ್ರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಒಂದೆಡೆ ಮನೆ ನಿರ್ಮಾಣ ಸಾಲ, ಇನ್ನೊಂದೆಡೆ ಮಕ್ಕಳ ಶೈಕ್ಷಣಿಕ ಸಾಲದಿಂದ ಕುಟುಂಬ ಕಂಗೆಟ್ಟಿದೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರೂ ೫ ಸಾವಿರ ಮಾತ್ರ ಪಾವತಿಸಿದ್ದು, ನೊಂದ ಕುಟುಂಬಕ್ಕೆ ಸರ್ಕಾರದಿಂದ ಎನ್ ಪಿ ಎಸ್ ಸಹಿತ ಸೂಕ್ತ ಪರಿಹಾರ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಆಗ್ರಹಿಸಿದ್ದಾರೆ.