ಗುರುಪುರ ಬಂಗ್ಲೆಗುಡ್ಡೆಯಲ್ಲಿ ಇಂದಿರಾ ಸೇವಾ ಕೇಂದ್ರ ಉದ್ಘಾಟನೆ
ಕೈಕಂಬ : ಬಡವರ ಕಷ್ಟಕ್ಕೆ ಸ್ಪಂದಿಸದ ಬಿಜೆಪಿ ಸರ್ಕಾರದ ವಿರುದ್ಧ ಜನ ಸಿಡಿದೇಳುವ ದಿನಗಳು ದೂರವಿಲ್ಲ. ಬಡವರು ಮತ್ತು ಮಹಿಳೆಯರ ಉದ್ಧಾರಕ್ಕಾಗಿ ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿ ಜಾರಿಗೊಳಿಸಿದೆ. ಈ ಬಗ್ಗೆ ವಿಪಕ್ಷಗಳು ಅಸೂಯೆಪಡುತ್ತಿವೆ. ಇದಕ್ಕೆಲ್ಲ ಬೆಲೆ ಕೊಡದ ರಾಜ್ಯ ಸರ್ಕಾರ, ಎಲ್ಲ ವರ್ಗದ ಕಟ್ಟಕಡೆಯ ವ್ಯಕ್ತಿಗೂ ಕಾಂಗ್ರೆಸ್ ಗ್ಯಾರಂಟಿ ತಲುಪಿಸುವ ಉದ್ದೇಶದಿಂದ ಪಂಚಾಯತ್ ವ್ಯಾಪ್ತಿಯಲ್ಲಿ `ಇಂದಿರಾ ಸೇವಾ ಕೇಂದ್ರ’ ಸ್ಥಾಪಿಸುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಯತ್ ಅಲಿ ತಿಳಿಸಿದರು.
ಗುರುಪುರ ಬಂಗ್ಲೆಗುಡ್ಡೆಯ ಕಾಂಗ್ರೆಸ್ ಮುಖಂಡ ಹರೀಶ್ ಭಂಡಾರಿ ಅವರ ಮನೆಯಲ್ಲಿ ಇಂದಿರಾ ಸೇವಾ ಕೇಂದ್ರ ಉದ್ಘಾಟಿಸಿದ ಅಲಿ ಮಾತನಾಡಿ, ಮಣಿಪುರದಲ್ಲಿ ನಡೆದಂತಹ ಮಹಿಳೆಯರ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ವಿರುದ್ಧ ಕಾಂಗ್ರೆಸ್ ಪಕ್ಷವು ಮುಂದಿನ ವಾರ ಗುರುಪುರ ಕೈಕಂಬದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಿದ್ದು, ಪ್ರಜ್ಞಾವಂತ ಸಮಾಜದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಮಾತನಾಡಿ, ಗುರುಪುರ ಮತ್ತು ವಾಮಂಜೂರಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಮತ್ತು ಈ ಭಾಗದಲ್ಲಿ ಹೆಚ್ಚುವರಿ ಸರ್ಕಾರಿ ಬಸ್ ಸೇವೆ ಆರಂಭಿಸಲೋಸುಗ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಹತ್ತಿರದ ನೀರುಮಾರ್ಗದಲ್ಲಿ ಈಗಾಗಲೇ ಇಂದಿರಾ ಸೇವಾ ಕೇಂದ್ರ ಆರಂಭಿಸಲಾಗಿದೆ. ಉಳಿದಂತೆ ಇಂತಹ ಕೇಂದ್ರಗಳು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ೬ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಾಪನೆಯಾಗಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಜಿ.ಪಂ ಮಾಜಿ ಸದಸ್ಯ ಯು. ಪಿ. ಇಬ್ರಾಹಿಂ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ. ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆ ಯಥಾವತ್ತಾಗಿ ಅನುಷ್ಠಾನಗೊಳಿಸಲು ಸಿಎಂ ಸಿದ್ಧರಾಮಯ್ಯ ಮತ್ತು ಡಿಕೇಶಿಯವರು ಪಣ ತೊಟ್ಟಿದ್ದಾರೆ. ವಿಪಕ್ಷಗಳು ಎಷ್ಟೇ ಅಡ್ಡಗಾಲಿಟ್ಟರೂ ಗ್ಯಾರಂಟಿಯಲ್ಲಿ ಯಾವುದೇ ವ್ಯತ್ಯಯವಾಗದು. ಮನೆಮನೆಗೆ ಗ್ಯಾರಂಟಿ ತಲುಪಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ ಮಾತನಾಡಿ, ಈಗಾಗಲೇ ಮೂರು ಗ್ಯಾರಂಟಿ ಅನುಷ್ಠಾನಗೊಂಡಿದ್ದು, ಇನ್ನೆರಡು ಗ್ಯಾರಂಟಿ ಶೀಘ್ರ ಜಾರಿಗೆ ಬರಲಿದೆ. ಈ ಬಗ್ಗೆ ಪ್ರಚಾರ ಹೆಚ್ಚಿಸುವ ಉದ್ದೇಶ ಪಕ್ಷ ಹೊಂದಿದೆ ಎಂದರು.
ಡಿಸಿಸಿ ವಕ್ತಾರ ಗಣೇಶ್ ಪೂಜಾರಿ ಸ್ವಾಗತಿಸಿ ಪ್ರಸ್ತಾವಿಸಿದರು. ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಕಾಂಗ್ರೆಸ್ ಪ್ರಮುಖರಾದ ಪುರುಷೋತ್ತಮ ಮಲ್ಲಿ, ವಿನಯ ಕುಮಾರ್ ಶೆಟ್ಟಿ, ಅಬ್ದುಲ್ ಅಝೀಝ್ ಬಾಷಾ, ಹರೀಶ್ ಭಂಡಾರಿ, ಅಬ್ದುಲ್ ಗಫೂರ್(ಉದ್ಯಮಿ), ಕೃಷ್ಣ ಅಮೀನ್, ಸುನಿಲ್ ಪೂಜಾರಿ ಗಂಜಿಮಠ, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಅಶ್ರಫ್, ಬಬಿತಾ, ಶೋಭಾ ಕಲ್ಲಕಲ್ಲಂಬಿ, ಸದಾಶಿವ ಶೆಟ್ಟಿ, ಚಂದ್ರಾವತಿ, ಸಂಪಾ, ಜಯಲಕ್ಷ್ಮೀ ಅಡ್ಡೂರು, ಎ.ಕೆ ಮೊಹಮ್ಮದ್, ಬಾಷಾ ಮಾಸ್ಟರ್, ಮೊಹಮ್ಮದ್ ಉಂಞ, ಪದ್ಮನಾಭ ಶೆಟ್ಟಿ, ಬೂಬ ಪೂಜಾರಿ ಮಳಲಿ, ಪಕ್ಷ ಕಾರ್ಯಕರ್ತರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.