ಗುರುಪುರ : ಮನೆಗೆ ಉರುಳಿದ ಮರ ;
ಗುಡ್ಡ ಕುಸಿತ ; ಹೆಚ್ಚಿದ ಪ್ರವಾಹ ಭೀತಿ
ಕೈಕಂಬ : ಧಾರಾಕಾರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಮಠದಗುಡ್ಡೆ ಸೈಟ್‌ನಲ್ಲಿ ಮನೆ ಪಕ್ಕದ ಗುಡ್ಡ ಕುಸಿದು ಮನೆಗೆ ಅಪಾಯ ಎದುರಾಗಿದ್ದರೆ, ವನಭೋಜನದಲ್ಲಿ ಮನೆಗಳ ಮೇಲೆ ಉರುಳಿ ಅಪಾರ ನಷ್ಟ ಉಂಟಾಗಿದೆ.

ವನಭೋಜನದ ಬಳಿ ಗುಡ್ಡದ ಎರಡು ಮರಗಳು ಸೀತಾರಾಮ ದೇವಾಡಿಗ ಮತ್ತು ಉಮೇಶ್ ಭಂಡಾರಿ ಅವರ ಮನೆಗಳ ಮೇಲೆ ಬಿದ್ದಿದೆ. ಮರ ಬಿದ್ದು ದೇವಾಡಿಗರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಗೀಡಾಗಿ ಮನೆಯೊಳಗೆ ನೀರು ತುಂಬಿದೆ. ಕಳೆದ ರಾತ್ರಿಯೇ ಮನೆಯವರು ಬೇರೆಡೆಗೆ ಸ್ಥಳಾಂತರಗೊAಡಿದ್ದಾರೆ. ಇಲ್ಲಿ ವಿದ್ಯುತ್ ತಂತಿಗಳು ಕಡಿದು ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. ಮೆಸ್ಕಾಂ ಸಿಬ್ಬಂದಿಯು ಮರ ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ತುರ್ತು ಕಾರ್ಯಾಚರಣೆ ನಡೆಸಿದ್ದಾರೆ.

ಮೂಳೂರು ಮಠದಗುಡ್ಡೆ ಸೈಟ್ ಪ್ರದೇಶದಲ್ಲಿ ಬೇಬಿ ಎಂಬವರ ಮನೆಯ ಪಕ್ಕದಲ್ಲಿ ಗುಡ್ಡ ಕುಸಿದು ಮನೆಗೆ ಅಪಾಯ ಎದುರಾಗಿದೆ. ಇಲ್ಲಿ ತೋಡಿನ ನೀರು ಮನೆಯ ಬಳಿ ಹರಿಯುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಅಲ್ಲದೆ ಕೆಲವೆಡೆ ರಸ್ತೆ ಬದಿಯಲ್ಲಿ ಗುಡ್ಡ ಕುಸಿದಿದೆ. ಪಂಚಾಯತ್‌ನ ವಾರ್ಡ್ ಸದಸ್ಯರಾದ ರಾಜೇಶ್ ಸುವರ್ಣ ಮತ್ತು ಸಚಿನ್ ಅಡಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಿಡಿಒ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ.

ಫಲ್ಗುಣಿ ನದಿ ಪ್ರವಾಹ :
ಗಾಳಿ ಮಳೆಗೆ ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ನಿರಂತರ ಏರುತ್ತಿದ್ದು, ಗುರುಪುರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕುಕ್ಕುದಕಟ್ಟೆ, ಕಾರಮೊಗರು, ದೋಣಿಂಜೆ ಮೊದಲಾದ ತಗ್ಗು ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ನದಿ ಪಾತ್ರದಲ್ಲಿ ತೋಟಗಳಿಗೆ ನೀರು ಬಿದ್ದಿದ್ದರೆ ಮನೆಗಳಿಗೆ ಅಪಾಶಯ ಕಾದಿದೆ.