ಹದಗೆಟ್ಟ ಬೆಂಜನಪದವು-ಮಲ್ಲೂರು ರಸ್ತೆ
ಸ್ಥಳೀಯ ಹರಿ ಓಂ ಫ್ರೆಂಡ್ಸ್ ಸದಸ್ಯರಿಂದ ಜಲ್ಲಿ ಹುಡಿ ತುಂಬಿಸಿ ದುರಸ್ತಿ
ಪೊಳಲಿ : ಮಲ್ಲೂರು-ಬಿ ಸಿ ರೋಡ್ ಸಂಪರ್ಕಿಸುವ ಮುಖ್ಯ ರಸ್ತೆಯ ಬೆಂಜನಪದವು-ನೀರುಮಾರ್ಗದ ಮಧ್ಯೆ ಸುಮಾರು ಎರಡು ಕಿಮೀ ರಸ್ತೆ ಸಂಪೂರ್ಣ ಕಿತ್ತು ಹೋಗಿ ಹೊಂಡಗುಂಡಿಯಾಗಿದ್ದು ಜು.23ರಂದು ಭಾನುವಾರ ಸ್ಥಳೀಯ ಕಂಜಿಲಗುಡ್ಡೆಯ ಹರಿ ಓಂ ಫ್ರೆಂಡ್ಸ್ ಸದಸ್ಯರು ರಸ್ತೆಗೆ ಕಲ್ಲು, ಜಲ್ಲಿ ಹುಡಿ ತುಂಬಿಸಿ ಸಮತಟ್ಟುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಮಳೆಗಾಲದ ಆರಂಭದಲ್ಲೇ ಈ ರಸ್ತೆ ಸಂಪೂರ್ಣ ಕಿತ್ತು ಹೋಗಿತ್ತು. ಇತ್ತೀಚಿಗೆ ಸುರಿದ ಧಾರಾಕಾರ ಮಳೆಗೆ ರಸ್ತೆ ಹೊಂಡದಂತಾಗಿದ್ದು ವಾಹನ ಸಂಚಾರ ದುಸ್ಸರವಾಗಿತ್ತು. ಹೊಂಡಗಳಲ್ಲಿ ಕೆಸರು ನೀರು ತುಂಬಿದ್ದು, ಈಗಾಗಲೇ ಕೆಲವು ದ್ವಿಚಕ್ರ ವಾಹನಗಳು ಸ್ಕಿಡ್ಡಾಗಿ ಸವಾರರು ಗಾಯಗೊಂಡಿದ್ದಾರೆ. ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರ ದೂರಿದ್ದಾರೆ.
ಈ ಮಾರ್ಗವಾಗಿ ಇಂಜಿನಿಯರ್ ಕಾಲೇಜುಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ನಿತ್ಯದ ಪ್ರಯಾಣಿಕರಿಗೆ ಸರ್ವಿಸ್ ಬಸ್ ವ್ಯವಸ್ಥೆ ಇದ್ದು, ಹೊಂಡಾಗುಂಡಿಯಿಂದ ಕೆಲಮೊಮ್ಮೆ ಬಸ್‌ಗಳ ಟ್ರಿಪ್ ಕಟ್ ಆಗುತ್ತಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಸಾರ್ವಜನಿಕರ ತೊಂದರೆ ಪರಿಗಣಿಸಿದ ಸ್ಥಳೀಯ ಹರಿ ಓಂ ಫ್ರೆಂಡ್ಸ್ ಸದಸ್ಯರು ಭಾನುವಾರ ಶ್ರಮದಾನದ ಮೂಲಕ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ. ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಲ್ಲು, ಜಲ್ಲಿ ಹುಡಿ ಕಿತ್ತು ಹೋಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಕಾರ್ಯ ನಡೆಸಬೇಕು ಎಂದು ಈ ಭಾಗದ ಬಸ್ ಪ್ರಯಾಣಿಕರು ಆಗ್ರಹಿಸಿದ್ದಾರೆ.