Published On: Fri, Jul 21st, 2023

ಉಳಾಯಿಬೆಟ್ಟು ಪಂಚಾಯತ್ ಗ್ರಾಮಸಭೆ

ಕೈಕಂಬ: ಉಳಾಯಿಬೆಟ್ಟು ಪಂಚಾಯತ್‌ನ ೨೦೨೩-೨೪ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಪಂಚಾಯತ್ ಕಚೇರಿಯ ಫಲ್ಗುಣಿ ಸಮುದಾಯ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುವಾರ(ಜು.೨೦) ನಡೆಯಿತು.

ಉಳಾಯಿಬೆಟ್ಟಿನಲ್ಲಿರುವ ಅತಿ ಹಳೆಯ ಸರ್ಕಾರಿ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಶಾಲಾ ಶೌಚಾಲಯ ಸೋರುತ್ತಿದೆ. ಹಿಂದಿನ ಮೂರು ಗ್ರಾಮಸಭೆಗಳಲ್ಲಿ ಈ ಬಗ್ಗೆ ದೂರು ನೀಡಲಾಗಿದ್ದರೂ ಈವರೆಗೆ ದುರಸ್ತಿ ಕಾರ್ಯ ನಡೆದಿಲ್ಲ. ಮಕ್ಕಳು ಮಳೆ ನೀರಿಗೆ ನೆನದುಕೊಂಡು ಪಾಠ ಕೇಳುವ ಸ್ಥಿತಿ ಇದೆ. ತುರ್ತಾಗಿ ದುರಸ್ತಿ ಕಾರ್ಯವಾಗಬೇಕು. ಮಳೆಗಾಲ ಮುಗಿದ ಬಳಿಕ ಎಲ್ಲವೂ ಸರಿ ಇರುತ್ತದೆ ಎಂದು ಇಸ್ಮಾಯಿಲ್ ಮತ್ತು ಮನ್ಸೂರ್ ಹೇಳಿದರು.

ಶಿಕ್ಷಣ ಇಲಾಖೆ ಸಂಯೋಜನಾಧಿಕಾರಿ ವಿಶ್ವನಾಥ್ ಉತ್ತರಿಸಿ, ಈ ವಿಷಯ ಜಿಪಂ ಗಮನಕ್ಕೆ ತಂದು ಈ ಮಳೆಗಾಲದಲ್ಲೇ ಶಾಲಾ ಶೌಚಾಲಯ ದುರಸ್ತಿಗೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ವಾರ್ಡ್ ನಂಬ್ರ ೨ರ ಕಾಂತಾರಬೆಟ್ಟುವಿನಲ್ಲಿ ಕಳೆದ ನಾಲ್ಕು ತಿಂಗಳಿAದ ದಾರಿದೀಪ ಕೆಟ್ಟು ಹೋಗಿದೆ. ಪಂಚಾಯತ್‌ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ನಮ್ಮ ವಾರ್ಡ್ನ ಸದಸ್ಯರಿಂದ ಜನಸ್ಪಂದನೀಯ ಕೆಲಸಗಳು ನಡೆಯುತ್ತಿಲ್ಲ. ದಾರಿದೀಪ, ರಸ್ತೆ, ಶಾಲಾ ಸ್ಥಿತಿ ಉತ್ತಮವಾಗಿರದಿದ್ದರೂ, ಉಳಾಯಿಬೆಟ್ಟು ಪಂಚಾಯತ್‌ನ್ನು ಮಾದರಿ ಪಂಚಾಯತ್ ಮಾಡುತ್ತೇವೆ' ಎಂದು ಅಧ್ಯಕ್ಷರು ಹೇಳುತ್ತಿದ್ದಾರೆ ಎಂದು ಲತೀಫ್ ಹೇಳಿದರು. ಇದಕ್ಕೆ ಹಲವರು ಧ್ವನಿಗೂಡಿಸಿ,ದಾರಿದೀಪ ಯಾವಾಗ ಅಳವಡಿಸುತ್ತೀರಿ ? ಸ್ಪಷ್ಟ ಭರವಸೆ ನೀಡಿ” ಎಂದು ಆಗ್ರಹಿಸಿದರು.

ಇನ್ನೊಂದು ವಾರದಲ್ಲಿ ದಾರಿದೀಪಗಳು ಉರಿಯಲಿವೆ. ವಾರ್ಡ್ ಸದಸ್ಯರು ಅದರ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ದಾರಿದೀಪಗಳು ಕೆಟ್ಟು ಹೋಗುವುದು ಸಾಮಾನ್ಯ ಎಂದು ಅಧ್ಯಕ್ಷ ಹರಿಕೇಶ್ ಶೆಟ್ಟಿ ಹೇಳಿದರು.

ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿರಾಗ್ ಮಾತನಾಡಿ, ಮಂಗಳೂರು ನಗರದಲ್ಲಿ ಈಗ ಡೆಂಗ್ಯೂ ಜ್ವರ ವ್ಯಾಪಕಗೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಜನರು ಹೆಚ್ಚು ಜಾಗೃತರಾಗಬೇಕು. ಮೂರು ದಿನಕ್ಕಿಂತ ಹೆಚ್ಚು ದಿನ ಜ್ವರ ಬಾಧಿಸಿದರೆ ತಕ್ಷಣ ವೈದ್ಯರನ್ನು ಕಂಡು ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು. ಔಷಧಿ ಪಡೆಯುವಲ್ಲಿ ವಿಳಂಬ ನೀತಿ ಅನುಸರಿಸಬಾರದು. ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇರಿಸಬೇಕು ಎಂದರು.

ವಾರ್ಷಿಕ ನೀರು ಮತ್ತು ಮನೆ ತೆರಿಗೆ ವಸೂಲಿ ಬಗ್ಗೆ ಮಾಹಿತಿ ಕೇಳಿದ ರಾಜೀವ ಶೆಟ್ಟಿ ಸಲ್ಲಾಜೆ, ಪಂಚಾಯತ್ ಆಡಳಿತದಿಂದ ಸಮಯೋಚಿತವಾಗಿ ತೆರಿಗೆ ವಸೂಲಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು.

ಕಳೆದ ಒಂದು ವರ್ಷದಲ್ಲಿ ೫.೪೮ ಲಕ್ಷ ರೂ ನೀರು ತೆರಿಗೆ ಬಾಕಿಯಾಗಿದ್ದು, ಪ್ರಸಕ್ತ ೬ ತಿಂಗಳಲ್ಲಿ ಅವಧಿಯಲ್ಲಿ ೧.೯೫ ಲಕ್ಷ ರೂ ವಸೂಲಿಯಾಗಿದೆ. ೧೧.೪೪ ಲಕ್ಷ ರೂ ಮನೆ ತೆರಿಗೆ ಬಾಕಿಯಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ೬ ಲಕ್ಷ ರೂ ವಸೂಲಿಯಾಗಿದೆ. ತೆರಿಗೆ ವಸೂಲಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಪಿಡಿಒ ಮಾಹಿತಿ ನೀಡಿದರು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ರತ್ನಾ ಎಸ್, ಪಂಚಾಯತ್ ಸದಸ್ಯರು ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ(ಇಒ) ಮಹೇಶ್ ಕುಮಾರ್ ಹೊಳ್ಳ ನೋಡೆಲ್ ಅಧಿಕಾರಿಯಾಗಿದ್ದರು. ಪೊಲೀಸ್, ಅಂಚೆ, ಶಿಕ್ಷಣ, ಕೃಷಿ, ಆರೋಗ್ಯ ಸಹಿತ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅನಿತಾ ಕ್ಯಾಥರಿನ್ ಸ್ವಾಗತಿಸಿದರು. ಪಂಚಾಯತ್ ಲೆಕ್ಕಾಧಿಕಾರಿ ರಾಮಪ್ಪ ಮತ್ತು ಸಿಬ್ಬಂದಿ ಸೌಮ್ಯ ವರದಿ ಮಂಡಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter