ಮುತ್ತೂರು ಗ್ರಾಮಸಭೆ, ಜಾಗ ನೀಡದೆ ಹಕ್ಕುಪತ್ರ ವಿತರಣೆಗೆ ಆಕ್ಷೇಪ, ಅಂಗಡಿಗಳಲ್ಲಿ ಮದ್ಯ ಮಾರಾಟ ನಿಲ್ಲಿಸಿ ಗ್ರಾಮಸ್ಥರ ಅಗ್ರಹ
ಕೈಕಂಬ: ಮುತ್ತೂರು ಗ್ರಾಮ ಪಂಚಾಯತ್ ನ 2023-24ನೆ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ ಅಧ್ಯಕ್ಷತೆಯಲ್ಲಿ ಕುಲವೂರು ನಾರಾಯಣ ಗುರುಸಭಾಭವನದಲ್ಲಿ ಬುಧವಾರ ನಡೆಯಿತು.ಗ್ರಾಮ ಪಂಚಾಯತ್ ವಿತರಣೆ ಮಾಡಿರುವ ಹಕ್ಕುಪತ್ರ ಗ್ರಾಮಸಭೆಯಲ್ಲಿ ಆಡಳಿತ ಮತ್ತು ಗ್ರಾಮಸ್ಥರ ನಡುವೆ ಭಾರೀ ವಾಗ್ವಾದ,ಬಿಸಿಯೇರಿದ ಚರ್ಚೆಗೆ ಕಾರಣವಾಯಿತು.

ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 62 ಜನರಿಗೆ ಹಕ್ಕುಪತ್ರ ವಿತರಿಸಿ ನಾಲ್ಕು ವರ್ಷವಾದರೂ ನಿವೇಶನ ಗುರುತಿಸಿಕೊಟ್ಟಿಲ್ಲ, ಹಕ್ಕುಪತ್ರಗಳನ್ನು ಪಂಚಾಯತ್ ವಾಪಾಸ್ ತೆಗೆದುಕೊಂಡಿದೆ,ಜಾಗ ಗುರುತಿಸದೆ ಹಕ್ಕುಪತ್ರ ನೀಡಿದ್ದು ಯಾಕೆ, ಈ ಬಗ್ಗೆ ಉತ್ತರಿಸಲು ಗ್ರಾಮಸಭೆಗೆ ತಹಶೀಲ್ದಾರ್ ಬರಬೇಕು ಎಂದು ಕಳೆದ ಗ್ರಾಮಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು ಆದರೆ ತಹಶೀಲ್ದಾರ್ ಬಂದಿಲ್ಲ ನಮಗೆ ತಹಶೀಲ್ದಾರ್ ಉತ್ತರ ನೀಡಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದರು. ಈ ವೇಳೆ ಉತ್ತರಿಸಿದ ಗ್ರಾಮಕರಣಿಕ ಮುತ್ತಪ್ಪ ಬೋಳಿಯದಲ್ಲಿ ಗುರುತಿಸಲಾದ ಜಾಗದಲ್ಲಿ ಕೇವಲ 50 ಫಲಾನುಭವಿಗಳಿಗೆ ಮಾತ್ರ ನಿವೇಶನ ಲಭ್ಯವಿದೆ ಉಳಿದಂತೆ ಮುತ್ತೂರಿನ ಕಳ್ಳಿಮಾರ್ ಎಂಬಲ್ಲಿ ಜಾಗ ಗುರುತಿಸಲಾಗಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಜಾಗ ಗುರುತಿಸದೆ, ಸಮತಟ್ಟು ಮಾಡದೇ ಹಕ್ಕುಪತ್ರ ವಿತರಣೆ ಮಾಡಿದ್ದು ಯಾಕೆ? ಒಂದೋ ನಿವೇಶನ ನೀಡಿ ಇಲ್ಲವಾದರೆ ವಾಪಸ್ ಪಡೆದಿರುವ ಹಕ್ಕುಪತ್ರಗಳನ್ನು ಒಂದು ತಿಂಗಳ ಒಳಗೆ ಫಲಾನುಭವಿಗಳಿಗೆ ಹಿಂತಿರುಗಿಸಿ ಎಂದು ಅಗ್ರಹಿಸಿ, ನಿವೇಶನ ಹಂಚಿಕೆಯಲ್ಲಿ ಲೋಪವಾಗಿದೆ ಇದಕ್ಕೆ ತಹಶೀಲ್ದಾರ್ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು.ಒಂದು ಹಂತದಲ್ಲಿ ಗ್ರಾಮಸಭೆಯನ್ನು ಮುಂದೂಡಿ ಎಂದು ಗ್ರಾಮಸ್ಥರಿಂದ ಬಂದ ಸಲಹೆಗೆ ಪ್ರತಿಕ್ರಿಯೆ ನೀಡಿದ ನೋಡಲ್ ಅಧಿಕಾರಿಯಾಗಿದ್ದ ತಾಲೂಕು ಪಂಚಾಯತ್ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹಾಲಕ್ಷ್ಮಿ ಅವರು ಸಭೆಯನ್ನು ಮುಂದೂಡುವುದು ದೊಡ್ಡ ವಿಷಯವಲ್ಲ ಮತ್ತು ಸೂಕ್ತವಲ್ಲ. ಗ್ರಾಮಸಭೆ ನಡೆಯಬೇಕು ಎಂಬುದು ನಿಮ್ಮ ಉದ್ದೇಶವಾಗಬೇಕು ನೀವು ಕೇಳಿಸಿಕೊಳ್ಳಿ, ಗ್ರಾಮಸಭೆ ಮುಂದೂಡುವುದು ಅಧಿಕಾರಿಯಾಗಿ ನನಗೆ ಅವಮಾನ, ನಿಮ್ಮ ಅಹವಾಲುಗಳನ್ನು ಈಡೇರಿಸುವ ಜವಾಬ್ದಾರಿ ನನ್ನದು,
ತಹಶೀಲ್ದಾರ್ ಪರವಾಗಿ ಗ್ರಾಮಕರಣಿಕರು ಹಾಜರಿದ್ದಾರೆ ಅವರು ಉತ್ತರ ನೀಡುತ್ತಾರೆ. ಪ್ರತಿ ಗ್ರಾಮಸಭೆಯಲ್ಲಿ ಅದೇ ವಿಚಾರವನ್ನು ಪದೇ ಪದೇ ಚರ್ಚೆ ಮಾಡುವ ಬದಲು ನಾವು ಬುದ್ದಿವಂತರಾಗಿ ಕೆಲಸಗಳು ಯಾವ ಹಂತದಲ್ಲಿ ಇದೆ ಎಂಬುದರ ಬಗ್ಗೆ ನಿಗಾ ವಹಿಸಿ ಪೂರ್ತಿಗೊಳ್ಳುವಂತೆ ನೋಡಿಕೊಳ್ಳಬೇಕು ಅದೇ ರೀತಿ ಅಧಿಕಾರಿ ವರ್ಗ ಮತ್ತು ಪಂಚಾಯತ್ ಆಡಳಿತ ಗ್ರಾಮಸ್ಥರ ಬೇಡಿಕೆಗಳು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಕಳೆದ ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯಗಳು, ಗ್ರಾಮಸ್ಥರ ಬೇಡಿಕೆಗಳು ಅನುಷ್ಠಾನವಾಗಿದೆಯೇ ಎಂಬ ಸರಿಯಾದ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ಪ್ರತಿ ಗ್ರಾಮಸಭೆಗೆ ಬೇರೆ ಬೇರೆ ನೋಡಲ್ ಅಧಿಕಾರಿಗಳು ಬಂದು ಇದೆ ರೀತಿಯ ಭರವಸೆ ನೀಡುತ್ತಾರೆ. ಇದೆ ರೀತಿ ಭರವಸೆ ನೀಡಿ ಗ್ರಾಮಸ್ಥರನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಗ್ರಾಮ ಪಂಚಾಯತ್ ನ ವರ್ಷದ ಎಲ್ಲಾ ಗ್ರಾಮಸಭೆಗೆ ಒಬ್ಬರನ್ನೇ ನೋಡಲ್ ಅಧಿಕಾರಿಯನ್ನು ನಿಯೋಜನೆ ಮಾಡುವ ಪ್ರಸ್ತಾವನೆ ಇದೆ. ಆದುದರಿಂದ ಮುಂದೆ ಈ ರೀತಿ ಆಗದು ಎಂದು ನೋಡಲ್ ಅಧಿಕಾರಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಕಿರಿಯ ಇಂಜಿನಿಯರ್ ವಿಶ್ವನಾಥ್ ಮಾತನಾಡಿ ಗುಂಡಿಮಾರ್ ಎಂಬಲ್ಲಿ ನಿವೇಶನಕ್ಕೆ ಗುರುತಿಸಲಾದ ಜಮೀನು ಸಮತಟ್ಟುಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಆರಂಭವಾಗಲಿದೆ. ಆದರೆ ಕಾಮಗಾರಿಗಳಿಗೆ ಅನುಮೋದನೆಗಳನ್ನು ಸದ್ಯ ತಡೆಹಿಡಿಯಲಾಗಿದೆ ಎಂದರು.
ಕುಪ್ಪೆಪದವು ಆರೋಗ್ಯಕೇಂದ್ರ ಈಗ ಸಾಯಂಕಾಲ ನಾಲ್ಕುವರೆ ಗಂಟೆಗೆ ಮುಚ್ಚಲಾಗುತ್ತಿದೆ. ಕನಿಷ್ಠ 5ಗಂಟೆಯವರೆಗಾದರೂ ಕೇಂದ್ರವನ್ನು ತೆರೆಯುವಂತೆ ಗ್ರಾಮಸ್ಥರು ಅಗ್ರಹಿಸಿದರು.
ನೋಣಾಲಿನಲ್ಲಿ ರಸ್ತೆ ಬದಿಯ ಬ್ರಹತ್ ಮರಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಬೋಳಿಯ ಪರಿಸರದಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಸಲಾಗುತ್ತಿದೆ ಯಾಕೆ ಕೃಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅಬಕಾರಿ ಇಲಾಖೆಯನ್ನು ಪ್ರಶ್ನಿಸಿದಾಗ ಉತ್ತರಿಸಿದ ಅಬಕಾರಿ ನಿರೀಕ್ಷಕಿ ಸುಮಾ ಜಿ.ಎಂ. ಗ್ರಾಮಸ್ಥರು ಮಾಹಿತಿ ನೀಡಿದರೆ ಕೃಮ ಕೈಗೊಲ್ಲುವುದಾಗಿ ಹೇಳಿದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಮದ್ಯ ಮಾರಾಟ ಮಾಡುವ ಅಂಗಡಿಗಳ ಬಳಿ ಅಬಕಾರಿ ಮತ್ತು ಪೊಲೀಸ್ ವಾಹನಗಳು ನಿಂತಿರುತ್ತವೆ ಯಾಕೆ? ನಿಮಗೆ ಮಾಹಿತಿ ಇಲ್ಲವೇ? ಕೃಮ ಕೈಗೊಳ್ಳಬಹುದಲ್ಲವೇ ಎಂದು ಮರು ಪ್ರಶ್ನೆಗೆ ಯಾವುದೇ ಉತ್ತರ ಸಿಗಲಿಲ್ಲ. ಪಂಚಾಯತ್ ಉಪಾಧ್ಯಕ್ಷೆ ಮಾಲತಿ, ಪಂಚಾಯತ್ ನ ಎಲ್ಲಾ ಸದಸ್ಯರುಗಳು,
ಮೆಸ್ಕಾಂ ಎಡಪದವು ಶಾಖಾಧಿಕಾರಿ ವೀರಭದ್ರಪ್ಪ, ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಕಿರಣ್ ಕುಮಾರ್, ಆಹಾರ ಇಲಾಖೆಯ ಪ್ರಕಾಶ್, ಪಶು ಇಲಾಖೆಯ ಡಾ. ಪ್ರಸಾದ್ ರೈ, ಸಮಾಜ ಕಲ್ಯಾಣ ಇಲಾಖೆಯ ಭಾಗ್ಯವತಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ(ಗ್ರಾಮಾಂತರ)ಯ ಅಂಗನವಾಡಿಗಳ ಮೇಲ್ವಿಚಾರಕಿ ಮಾಲಿನಿ, ಕೃಷಿ ಇಲಾಖೆಯ ಚಿದಂಬರ ಮೂರ್ತಿ, ಬಜಪೆ ಪೊಲೀಸ್ ಠಾಣೆಯ ಸರನಪ್ಪ, ಮ., ನರೇಗಾ ಯೋಜನೆಯ ನಿಶ್ಮಿತಾ, ಕೆ.ಆರ್.ಐ.ಡಿ.ಎಲ್ ನ ಜೂನಿಯರ್ ಇಂಜಿನಿಯರ್ ಚಿರಾಗ್ ಶೆಟ್ಟಿ, ಜೆಜೆಎಂ ಇಂಜಿನಿಯರ್ ಸಂದೀಪ್ ಶೆಟ್ಟಿ, ಯೂನಿಯ್ ಬ್ಯಾಂಕ್ ನ ಅಧಿಕಾರಿ ಸೂರ್ಯಕಾಂತ್, ಶಿಕ್ಷಣ ಸಂಯೋಜಕ ವಿಶ್ವನಾಥ್, ಮುತ್ತೂರು ಪಿಯು ಕಾಲೇಜಿನ ರಘುರಾಮ್ ನಾಯಕ್,
ಬೋಳಿಯ ಶಾಲೆಯ ನಾಗೇಶ್ ನಾಯ್ಕ್,
ಮುತ್ತೂರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೋಹಿಣಿ ಸಭೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಕರಣಿಕರ ಕಚೇರಿ ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ನಾಯ್ಕ್ ವರದಿ ಮಂಡಿಸಿ, ಸಭೆಯನ್ನು ನಿರ್ವಹಿಸಿದರು.ಸಿಬ್ಬಂದಿ ಸಹಕರಿಸಿದರು