ಕಲ್ಲಡ್ಕ ಶ್ರೀರಾಮ ಹಿ. ಪ್ರಾ.ಶಾಲೆಯಲ್ಲಿ ‘ಶಾರದಾದೇವಿ’ ನೂತನ ಕುಟೀರ ಉದ್ಘಾಟನೆ
ಬಂಟ್ವಾಳ: ಶಿಕ್ಷಣವೇ ದೇಶದ ಆಧಾರ ಸ್ತಂಭವಾಗಿದೆ. ನಮ್ಮತನವನ್ನು ತೊಡಗಿಸಿಕೊಂಡು ಶ್ರೀರಾಮ ವಿದ್ಯಾಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಚಿಂತಕರ, ದೇಶಾಭಿಮಾನದ ಶಿಕ್ಷಣ ನೀಡಬೇಕು. ಜಗತ್ತಿನ ಎಲ್ಲಾ ದೇಶಗಳು ಬೋಧಿಸುವುದು ರಾಷ್ಟ್ರೀಯತೆಯ ಶಿಕ್ಷಣವನ್ನೇ ಆದರೆ ಈಗಿನ ರಾಜ್ಯ ಸರ್ಕಾರ ಅಂತಹ ಪಠ್ಯಗಳನ್ನು ಕೈ ಬಿಟ್ಟಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಟೀಕಿಸಿದರು.
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ “ಶಾರದಾದೇವಿ” ಎಂಬ ಕುಟೀರ ಉದ್ಘಾಟನೆ ಹಾಗೂ ೧ನೇ ತರಗತಿಗೆ ಮತ್ತು ಹೊಸದಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಳೆ ಮಕ್ಕಳ ಹೃದಯಂಗಳದಲ್ಲಿ ದೇಶಭಕ್ತಿ, ಸಂಸ್ಕೃತಿ, ಸಂಸ್ಕಾರವನ್ನು ಬಿತ್ತಿ, ಅವರನ್ನೇ ರಾಷ್ಟ್ರದ ಶಕ್ತಿಯನ್ನಾಗಿಸುವ ಚಿಂತನೆಯ ನಿಟ್ಟಿನಲ್ಲಿ ಕಳೆದ ೩೫ ವರ್ಷಗಳಿಂದ ಶಿಕ್ಷಣದ ಜೊತೆ ಜೊತೆಗೆ ಸಂಸ್ಕೃತಿ, ಸಂಸ್ಕಾರವು ನಮ್ಮ ಶಾಲೆಯು ನೀಡುತ್ತಾ ಬಂದಿದ್ದು, ಹೊಸದಾಗಿ ನಿರ್ಮಾಣವಾದ ಕುಟೀರವು ಮಾದರಿ ಪಾಠಶಾಲೆಯಾಗಿ ಮುಂದಕ್ಕೆ ಮಾದರಿ ಶಾಲೆಯಾಗಲಿದೆ.” ಎಂದು ಹೇಳಿದರು.
ನೂತನವಾಗಿ ನಿರ್ಮಿಸಲಾದ ಶಾರದಾದೇವಿ ಕುಟೀರವನ್ನು ಕಾರ್ಕಳ ಬೈಲೂರಿನ ಶ್ರೀರಾಮಕೃಷ್ಣ ಶಾರದಾಶ್ರಮದ ಸ್ಥಾಪಕರಾದ ಸುಮತಾ ನಾಯಕ್ ಅಮ್ಮುಂಜೆ, ಗಂಟೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಆಧ್ಯಾತ್ಮಿಕ – ನೈತಿಕ ಶಿಕ್ಷಣ ದೊಕುತ್ತಿದೆ. ಹೊಸದಾಗಿ ನಿರ್ಮಾಣವಾಗುವ ರಾಮರಾಜ್ಯದ ಪ್ರಜೆಗಳು ನೀವು ಎಂದರು.ನಂತರ ವಿದ್ಯಾರ್ಥಿ ಜೀವನಕ್ಕೆ ಕಾಲಿಡುತ್ತಿದ್ದ ಒಂದನೇ ತರಗತಿಯ ಪುಟಾಣಿಗಳು ಅಧ್ಯಾಪಕ ವೃಂದದವರು ಪೂರ್ಣಕಂಭ ಸ್ವಾಗತದೊಂದಿಗೆ ಕರೆತರಲಾಯಿತು.
ಒಂದನೆ ತರಗತಿಯ ಪುಟಾಣಿಗಳಿಗೆ ಹಾಗೂ ನೂತನವಾಗಿ ಸೇರಿದ ವಿದ್ಯಾರ್ಥಿಗಳಿಗೆ, ಅಧ್ಯಾಪಕ ವೃಂದದವರು ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕಧಾರಣೆ ಮಾಡಿ, ಸಿಹಿ ನೀಡಿದರು. ನಂತರ ಹೊಸದಾಗಿ ಸೇರಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಘೃತಾಹುತಿ ಮಾಡಿ, ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.
ಮಂಗಳೂರು ಎಸ್.ಡಿ.ಎಂ.ಸಿ ಸ್ಫಾಪರ ಟ್ರಸ್ಟಿಗಳಾದ ಲತಾ ಜೆ ರಾವ್,ಮಂಗಳೂರು ಎ.ಆರ್.ಎಂ ಮೋಟರ‍್ಸ್ ಪ್ರೈ. ಲಿಮಿಟೆಡ್ ನ ಆಡಳಿತ ಪಾಲುದಾರರಾದ ಆಶಾ ರಾವ್, ಮಂಗಳೂರು ಎ.ಜೆ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜನರಲ್ ಆ್ಯಂಡ್ ಲ್ಯಾಪ್ರೊಸ್ಕೋಪಿಕ್ ಆಗಿರುವ ಡಾ. ಕಿಶನ್ ರಾವ್ ಬಾಳಿಲ, ಮಂಗಳೂರಿನ ಸಾವಿತ್ರಿ ಮೆಮೋರಿಯಲ್ ಟ್ರಸ್ಟ್ ನ ಆಡಳಿತ ನಿರ್ದೇಶಕರಾದ ವಿಶ್ವಾಸ್ ರಾವ್, ಶ್ರೀರಾಮ ವಿದ್ಯಾಕೆಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್ ಎನ್, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ.ಕಮಲಾ ಪ್ರಭಾಕರ್ ಭಟ್ , ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಸುಶ್ಮಿತಾ ಭಟ್ ಸ್ವಾಗತಿಸಿದರು. ವಿಜೇತ್ ವಂದಿಸಿದರು.ವಿದ್ಯಾರ್ಥಿಗಳಾದ ವೈಷ್ಣವಿ ಕಾಮತ್ ನಿರೂಪಿಸಿದರು.