ಅಣಬೆ ಫ್ಯಾಕ್ಟರಿ ಸ್ಥಗಿತಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮನವಿ
ಕೈಕಂಬ : ವಾಮಂಜೂರು ಆಶ್ರಯನಗರದಲ್ಲಿ ದುರ್ವಾಸನೆ ಬೀರುತ್ತಿರುವ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕವು ದಕ್ಷಿಣ ಕನ್ನಡ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ರವಿಕುಮಾರ್ ಜೂ. ೧೧ರಂದು ನೀಡಿರುವ ಆದೇಶ ಉಲ್ಲಂಘಿಸಿ ಕಾರ್ಯಾಚರಿಸುತ್ತಿದೆ ಎಂದು ದೂರಿದ ವೈಟ್‌ಗ್ರೋ ಎಗ್ರಿ ಅಣಬೆ ಫ್ಯಾಕ್ಟರಿ ಹೋರಾಟ ಸಮಿತಿ, ಬುಧವಾರ ಹೊಸ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮರು ದೂರು ನೀಡಿ, ಫ್ಯಾಕ್ಟರಿ ಸ್ಥಗಿತಕ್ಕೆ ಮನವಿ ಮಾಡಿತು.
ಅಣಬೆ ಘಕದ ಕಾಂಪೋಸ್ಟ್ ಘಟಕ ಸ್ಥಗಿತಗೊಳಿಸಬೇಕು. ಹೊಸದಾಗಿ ಅಣಬೆ ಬೆಳೆಸಬಾರದು. ಘಟಕದೊಳಗೆ ಅಣಬೆ ಕೃಷಿಗೆ ಸಂಬAಧಿಸಿದ ಯಾವುದೇ ಕಚ್ಚಾ ಸೊತ್ತು ಸಾಗಿಸಬಾರದು ಎಂದು ಜೂ. ೧೧ರಂದು ಡೀಸಿಯವರು ಆದೇಶಿಸಿದ್ದರು. ಆದಾಗ್ಯೂ, ಜೂ. ೧೧ರ ಬಳಿಕವೂ ಘಟಕದೊಳಗೆ ರಾಜಾರೋಷವಾಗಿ ಪ್ರವೇಶಿಸುತ್ತಿರುವ ಲಾರಿಗಳಿಗೆ ಹೋರಾಟ ಸಮಿತಿ ಸದಸ್ಯರು ತಡೆ ಹೇರಿದ್ದರೂ, ರಾತ್ರಿ ವೇಳೆ ಲಾರಿಗಳಲ್ಲಿ ಕದ್ದುಮುಚ್ಚಿ ಸರಕು ಸಾಗಿಸಲಾಗುತ್ತಿದೆ ಎಂದು ಡೀಸಿಯವರಿಗೆ ನೀಡಿದ ಮನವಿಯಲ್ಲಿ ದೂರಿದ್ದಾರೆ.
ಘಟಕದಿಂದ ಮತ್ತೆ ದುರ್ವಾಸನೆ ಆರಂಭಗೊಂಡಿದೆ. ಆಶ್ರಯನಗರ ವಸತಿ ಪ್ರದೇಶ ಮತ್ತು ಸುತ್ತಲ ಪ್ರದೇಶದ ಜನರ ಆರೋಗ್ಯಕ್ಕೆ ಕೆಡಲಾರಂಭಿಸಿದೆ. ಘಟಕದಿಂದ ಹೊರ ಹೊಮ್ಮುವ ಕೆಮಿಕಲ್ ದುರ್ವಾಸನೆಯಿಂದ ಜನರು ಚರ್ಮರೋಗ, ತುರಿಕೆ, ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೆ ಬಾಣಂತಿಯರು, ಮಕ್ಕಳು ಮತ್ತು ವಯೋವೃದ್ಧರಿಗೆ ಉಸಿರಾಡುವುದು ಸಮಸ್ಯೆಯಾಗಿ ಬಿಟ್ಟಿದೆ ಎಂದು ಸಮಿತಿ ದಾಖಲೆ ಸಹಿತ ಮನವರಿಕೆ ಮಾಡಿದೆ.
ಡೀಸಿ ಭೇಟಿ ನಿಯೋಗದಲ್ಲಿ ಅಡ್ವಕೇಟ್ ಜಗದೀಶ ಶೇಣವ, ತಿರುವೈಲು ವಾರ್ಡ್ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಓಂ ಪ್ರಕಾಶ್ ಶೆಟ್ಟಿ, ರಾಜಕುಮಾರ್ ಶೆಟ್ಟಿ, ಲಕ್ಷö್ಮಣ್ ಶೆಟ್ಟಿಗಾರ, ಶ್ರೀನಿವಾಸ ಸುವರ್ಣ, ಪ್ರಸಾದ್ ಆಳ್ವ, ಜಯಪ್ರಭಾ, ಕ್ಯಾರೊನ್ ಡಿ’ಸೋಜ, ಗೀತಾ, ಅನಿಲ್ ರೈ, ಕಾರ್ಮಿನ್ ಲೋಬೊ, ಶೇಖರ್ ಪೂಜಾರಿ ಇದ್ದರು.