ವಾಮಂಜೂರು ಎಸ್‌ಡಿಎಂ ಮಂಗಳಜ್ಯೋತಿ
ಸಮಗ್ರ ಶಾಲಾ ವಿದ್ಯಾರ್ಥಿ ಸರ್ಕಾರ ಉದ್ಘಾಟನೆ
ಕೈಕಂಬ: ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ೨೦೨೩-೨೪ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸರ್ಕಾರ, ಮತದಾರ ಸಾಕ್ಷರತಾ ಕ್ಲಬ್, ಸಾಹಿತ್ಯ ಸಂಘ, ಪರಿಸರ ಮತ್ತು ವಿಜ್ಞಾನ ಸಂಘ, ಕರಾಟೆ, ಕುಸ್ತಿ, ಭರತನಾಟ್ಯ, ಯಕ್ಷಗಾನ, ಸ್ಕೌಟ್&ಗೈಡ್ಸ್ ಮತ್ತಿತರ ೧೯ ಕ್ಲಬ್‌ಗಳ ಉದ್ಘಾಟನೆಯೊಂದಿಗೆ ಶಾಲಾ ಹಳೆ ವಿದ್ಯಾರ್ಥಿಗಳು ಕೊಡುಗೆಯಾಗಿ ಒದಗಿಸಿದ ಬ್ಯಾಂಡ್ ಸೆಟ್ ಹಸ್ತಾಂತರ ಕಾರ್ಯಕ್ರಮ ಸೋಮವಾರ(ಜೂ. ೧೯) ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಶೇಖರ ಅಜೆಕಾರು ಮಾತನಾಡಿ, ಸರ್ಕಾರವು ಅನುದಾನಿತ ಶಾಲೆಗಳಲ್ಲಿ ಖಾಲಿ ಬಿದ್ದಿರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಮಾಜಿಕ ಆಗುಹೋಗುಗಳತ್ತ ಗಮನಹರಿಸಬೇಕು. ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರದೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿ ಸಮಾಜದ ಋಣ ತೀರಿಸುವ ಬಗ್ಗೆ ಯೋಚಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕ ರಮೇಶ್ ಆಚಾರ್ಯ ಮಾತನಾಡಿ, ಶಾಲೆಗಳಲ್ಲಿ ರಚಿಸಲಾದ ವಿದ್ಯಾರ್ಥಿ ಸರ್ಕಾರಗಳ ಮೂಲಕ ಮಕ್ಕಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಾಧನೆಯ ಹಾದಿಯಲ್ಲಿ ಕೆಲವೊಮ್ಮೆ ಎಡವಿದರೂ ಛಲ ಬಿಡದೆ ಮುನ್ನಗ್ಗಬೇಕು. ಯಶಸ್ಸು ಒಂದೇ ದಿನದಲ್ಲಿ ಬರುವುದಿಲ್ಲ. ಅದು ನಿರಂತರ ಪ್ರಯತ್ನಕ್ಕೆ ಸಿಗುವ ಫಲ ಎಂದರು.

ಶಾಲೆಯ ವಿದ್ಯಾರ್ಥಿ ಸರ್ಕಾರದ ನಾಯಕರಾದ ಪ್ರಿನ್ಸ್ ನಿಯೋಲ್ ಸಿಕ್ವೇರ, ವಿಜೇತ್, ವಿಜೇತ್, ಪ್ರಜ್ವಲ್, ಪ್ರಿಯಾಂಕಾ ಗೌತಮಿ, ತ್ರಿಶಾ ಪ್ರಮಾಣ ವಚನ ಸ್ವೀಕರಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು. ಉದ್ಯಮಿ ಉದಯ ಕುಮಾರ್ ಕುಡುಪು, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಅನಿತಾ ಎ., ಕರಾಟೆ ಶಿಕ್ಷಕ ನಾರಾಯಣ, ಕುಸ್ತಿ ಶಿಕ್ಷಕ ರತನ್, ಬ್ಯಾಂಡ್ ಸೆಟ್ ಶಿಕ್ಷಕ ಕಿಶನ್, ಭರತ ನಾಟ್ಯ ಶಿಕ್ಷಕಿ ವೈಷ್ಣವಿ ಪ್ರಭು, ಯೋಗ ಶಿಕ್ಷಕಿ ಕ್ಷಮಾ, ಹಳೆ ವಿದ್ಯಾರ್ಥಿಗಳಾದ ಸುಧಾಕರ, ಸುರೇಶ್, ರೋನ್ಸನ್, ಕವಿರಾಜ್, ಶಿಕ್ಷಕರು, ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳು, ಪಾಲಕರು ಇದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ನಿರೂಪಿಸಿದರೆ, ಶಿಕ್ಷಕಿ ಪ್ರಸನ್ನಾ ವಂದಿಸಿದರು.