ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಬಾಲಕೃಷ್ಣ ಅವರು ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿ“ಪರಿಸರದೊಂದಿಗೆ ಪ್ರತಿಯೊಂದು ಜೀವಿಗೂ ಭಾವನಾತ್ಮಕ ಸಂಬಂಧವಿದೆ. ಪೂರ್ವಜರು ಪರಿಸರವನ್ನು ಪ್ರೀತಿಸುತ್ತಿದ್ದರು. ಪೂಜನೀಯ ಭಾವನೆಯನ್ನು ಹೊಂದಿದ್ದರು. ಈ ರೀತಿಯಾಗಿ ಪರಿಸರ ಉಳಿಸುತ್ತಿದ್ದರು ಎಂದರು.

ನಿಸ್ವಾರ್ಥ ಸೇವಾ ಮನೋಭಾವ ಹೊಂದಿರುವ ಈ ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ಕೃಷಿ ಆರಂಭಿಸುವ ಮುನ್ನ ಭೂಮಿ ಪೂಜೆ, ನೀರಿಗೆ ಗಂಗಾಪೂಜೆ ಹೀಗೆ ಪಂಚಭೂತಗಳನ್ನು ಪೂಜಿಸುವ ಪುಣ್ಯಭೂಮಿ ಈ ಭಾರತ. ಆದರೆ ಮಳೆಗಾಲದೊಂದಿಗೆ ಆಚರಿಸಬೇಕಾಗಿದ್ದ ಈ ವಿಶ್ವ ಪರಿಸರ ದಿನವನ್ನು ನಾವಿಂದು ಮಳೆಯ ಕೊರತೆ, ನೀರಿನ ಅಭಾವ, ಬಿಸಿಯಾದ ವಾತಾವರಣ, ಅತಿಯಾದ ಬಾಯಾರಿಕೆಯಿಂದ ಆಚರಿಸುತ್ತಿರುವುದು ವಿಪರ‍್ಯಾಸವೆಂದೆನಿಸುತ್ತಿದೆ ಎಂದರು.

ಜೀವನದಲ್ಲಿ ಪ್ರತಿಯೊಬ್ಬರು ಸ್ವತಃ ಪರಿಸರವನ್ನು ತಾನೇ ಉಳಿಸುತ್ತೇನೆ ಎಂಬ ಧ್ಯೇಯ ಹೊಂದಿದ್ದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಪರಿಸರದ ಮಡಿಲಿನಲ್ಲಿ ನಾವೀದ್ದೇವೆ, ನಮ್ಮ ಮಡಿಲಿನಲ್ಲಿ ಪರಿಸರವಿಲ್ಲ” ಎಂಬ ಎಚ್ಚರಿಕೆಯೊಂದಿಗೆ ಪರಿಸರದ ಮಹತ್ವವನ್ನು ತಿಳಿಸಿಕೊಟ್ಟರು.

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು, ಅಧ್ಯಾಪಕರಾದ ಅನ್ನಪೂರ್ಣ ಎನ್ ಭಟ್ , ರೂಪಕಲಾ ಎಂ ಉಪಸ್ಥಿತರಿದ್ದರು.ವಿದ್ಯಾರ್ಥಿ ಆದಿತ್ಯ ಸ್ವಾಗತಿಸಿ, ವಂದಿಸಿದರು.