ಎ. ೨೬ರಿಂದ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪಾದಯಾತ್ರೆ
ಬಿಲ್ಲವರ ಕಡೆಗಣಿಸಿದ ಪಕ್ಷಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ : ಶ್ರೀ ಪ್ರಣವಾನಂದ ಸ್ವಾಮೀಜಿ
ಮಂಗಳೂರು : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಸಮಾಜಕ್ಕೆ ಆದ್ಯತೆ ಮೇರೆಗೆ ಟಿಕೆಟು ನೀಡುವಲ್ಲಿ ಕಾಂಗ್ರೆಸ್ ಎಡವಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಜಿಲ್ಲೆಯಲ್ಲಿ ತಲಾ ಮೂವರಿಗೆ ಟಿಕೆಟು ನೀಡುವಂತೆ ಮನವಿ ಮಾಡಲಾಗಿದ್ದರೂ ಕಾಂಗ್ರೆಸ್ ಕೇವಲ ಒಬ್ಬ ಅಭ್ಯರ್ಥಿಗೆ ಟಿಕೆಟು ನೀಡಿದೆ.
ಸಮಾಜದ ಮುಖಂಡರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳದ ಕಾಂಗ್ರೆಸ್, ಜಿಲ್ಲೆಯ ಬಹುಸಂಖ್ಯಾತ ಬಿಲ್ಲವ ಸಮಾಜಕ್ಕೆ ಅನ್ಯಾಯ ಮಾಡಿದೆ. ಮುಂದಿನ ೮ ದಿನದೊಳಗೆ ಸ್ಪಷ್ಟ ನಿರ್ಧಾರ ಪ್ರಕಟಗೊಳ್ಳದಿದ್ದರೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕಲಬುರ್ಗಿ ಜಿಲ್ಲೆಯ ಚಿತ್ತಾಪೂರದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪರಮಪೂಜ್ಯ ಡಾ. ಶ್ರೀ. ಪ್ರಣವಾನಂದ ಸ್ವಾಮಿ ಅವರು ಎಚ್ಚರಿಸಿದರು.
ಬಿಲ್ಲವ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ಕಾಂಗ್ರೆಸ್ ಮುಖಂಡರು ಕೂಡ ಎಡವಿದ್ದಾರೆ. ಸಮಾಜದ ಹೆಣ್ಮಕ್ಕಳಿಗೆ ಟಿಕೆಟು ನೀಡುವಲ್ಲಿ ಕಾಂಗ್ರೆಸ್ ಹಿಂದೇಟು ಹಾಕಿದೆ. ರಾಷ್ಟ್ರೀಯ ರಾಜಕೀಯ ಪಕ್ಷವೊಂದರ ದ್ವಂದ್ವ ನೀತಿ ವಿರುದ್ಧ ಚುನಾವಣೆ ಹೊತ್ತಲ್ಲಿ ಬಿಲ್ಲವ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಬಿಲ್ಲವರನ್ನು ಕಡೆಗಣಿಸಲಾದ ತಪ್ಪಿಗೆ ಆ ಪಕ್ಷವು ನಷ್ಟ ಅನುಭವಿಸಲಿದೆ. ಈ ವಿಷಯದಲ್ಲಿ ಬಿಲ್ಲವರು ಈಗಾಗಲೇ ಎಚ್ಚೆತ್ತುಕೊಂಡಿದ್ದಾರೆ ಎಂದರು.
ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅಂದ ಮಾತ್ರಕ್ಕೆ ಟಿಕೆಟು ನಿರಾಕರಣೆ ಎಷ್ಟರ ಮಟ್ಟಿಗೆ ಸಮಂಜಸ ? ನಾಲ್ಕುನಾಲ್ಕು ಬಾರಿ ಸೋತವರಿಗೂ ಟಿಕೆಟು ಸಿಕ್ಕಿದೆ. ಸೋತು ಗೆದ್ದವರಿದ್ದಾರೆ. ದ.ಕ ಜಿಲ್ಲೆಯಲ್ಲಿ ಬಹುಸಂಖ್ಯಾತ ಬಿಲ್ಲವ ಸಮಾಜಕ್ಕೆ ಹಾಗೂ ಉತ್ತರದಲ್ಲಿ ಈಡಿಗ-ನಾಮಧಾರಿ ಸಮಾಜಕ್ಕೆ ರಾಜಕೀಯವಾಗಿ ಹೆಚ್ಚಿನ ಆದ್ಯತೆ ಸಿಗಲೇಬೇಕು. ಈ ವಿಷಯದಲ್ಲಿ ಹೋರಾಟ ಮುಂದುವರಿಯುತ್ತದೆ ಎಂದವರು ಉತ್ತರಿಸಿದರು.
ಮಂಗಳೂರು ಬಿಜೆಪಿ ಅಭ್ಯರ್ಥಿಯೊಬ್ಬರು ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣರಿಗೆ ಇತ್ತಿಚೆಗೆ ಸಕ್ಯೂಟ್ ಹೌಸ್‌ನಲ್ಲಿ ಆಗಿರುವ ಅವಮಾನದ ಬಗ್ಗೆ ಪ್ರಸ್ತಾವಿಸಿದ ಸ್ವಾಮೀಜಿಯವರು, ಇದು ಖಂಡನೀಯ. ಇಂತಹ ಘಟನೆಗಳು ಯಾವುದೇ ಪಕ್ಷ ನಾಯಕರಿಂದ ನಡೆದರೂ ಬಿಲ್ಲವ ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಅಮೀನ್ ಉಪಸ್ಥಿತರಿದ್ದರು.