ಬಂಟ್ವಾಳ: ಅಪಪ್ರಚಾರಕ್ಕೆ ಮತದಾರ ಮಣೆ ಹಾಕಲ್ಲ ರೂ 5ಸಾವಿರ ಕೋಟಿ ಅನುದಾನ ಕಾಂಗ್ರೆಸ್ ಸಾಧನೆ ‘ಹೇಳಿದ್ದನ್ನೇ ಮಾಡಿದ್ದೇನೆ. ಮಾಡಿದ್ದನ್ನೇ ಹೇಳುತ್ತೇನೆ’ 10ರಿಂದ ಕ್ಷೇತ್ರದಾದ್ಯಂತ ರಥಯಾತ್ರೆ : ಮಾಜಿ ಸಚಿವ ರೈ ಹೇಳಿಕೆ
ಬಂಟ್ವಾಳ: ಕಳೆದ ಐದು ವರ್ಷಗಳ ಹಿಂದೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 5ಸಾವಿರ ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು, ‘ಹೇಳಿದ್ದನ್ನೇ ಮಾಡಿದ್ದೇನೆ. ಮಾಡಿದ್ದನ್ನೇ ಹೇಳುತ್ತೇನೆ’ ಹೊರತು ಯಾರೋ ಮಾಡಿದ ಕಾಮಗಾರಿಗಳನ್ನು ನನ್ನ ಸಾಧನೆ ಎಂದು ಹೇಳುವ ಜಾಯಮಾನ ನನ್ನದಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ.

ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ಕೇವಲ ರಸ್ತೆ ನಿರ್ಮಾಣ ಅಭಿವೃದ್ಧಿಯಲ್ಲ ಎಂದು ಹೇಳಿದ ಬಿಜೆಪಿಗರು ತುಂಡು ರಸ್ತೆ ಕಾಂಕ್ರಿಟೀಕರಣಕ್ಕೆ ದೊಡ್ಡ ಫ್ಲೆಕ್ಸ್ ಹಾಕುತ್ತಿದ್ದಾರೆ. ನಾನು ಮಂಜೂರುಗೊಳಿಸಿದ ಹಲವು ಯೋಜನೆ ಉದ್ಘಾಟಿಸಿ ನಮ್ಮ ಸಾಧನೆ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮಾ. 4ರಂದು ನಾವೂರು ಕೂಡಿಬೈಲಿನಲ್ಲಿ ‘ಮೂಡೂರು-ಪಡೂರು’ ಕಂಬಳ ನಡೆಯಲಿದೆ. ಆ ಬಳಿಕ ಮಾ. 10ರಂದು ಪೊಳಲಿ ಕ್ಷೇತ್ರದಿಂದ ‘ರಥಯಾತ್ರೆ’ ಆರಂಭಿಸಿ 14 ದಿನಗಳಲ್ಲಿ ಕ್ಷೇತ್ರದಾದ್ಯಂತ ಸಂಚರಿಸುವುದಾಗಿ ಅವರು ತಿಳಿಸಿದರು.ಈ ಹಿಂದೆ ಎಲ್ಲಾ ರಸ್ತೆ ನಿರ್ಮಾಣ ಮತ್ತು ಡಾಂಬರೀಕರಣ ಮಾತ್ರವಲ್ಲದೆ ಶಾಲೆ, ಅಂಗನವಾಡಿ ಕಟ್ಟಡ ರಚನೆ, ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟೆ, ಸೇತುವೆ ನಿರ್ಮಾಣ, ಒಟ್ಟು 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಮಿನಿ ವಿಧಾನಸೌಧ ಸಹಿತ ಸರ್ಕಾರಿ ಬಸ್ ನಿಲ್ದಾಣ, ಸರ್ಕಾರಿ ಪದವಿಪೂರ್ವ ಮತ್ತು ಪದವಿ ಕಾಲೇಜು, ಪಾಲಿಟೆಕ್ನಿಕ್ ಕಟ್ಟಡ ನಿರ್ಮಿಸಲಾಗಿದೆ. ಬಿ.ಸಿ.ರೋಡು-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮರೆಮಾಚಿ ಬಿಜೆಪಿ ಕೇವಲ ಅಪಪ್ರಚಾರದಿಂದ ನನ್ನನ್ನು ಸೋಲಿಸಿದೆ.
ಆದರೆ ನಾನು ಕೇವಲ ಚುನಾವಣೆಗಾಗಿ ಮಾತ್ರ ಇಲ್ಲಿಗೆ ವಲಸೆ ಬಂದವನಲ್ಲ. ಈ ಬಾರಿ ಮತದಾರರಿಗೆ ಎಲ್ಲಾ ಸತ್ಯ ಅರಿವಿಗೆ ಬಂದಿದ್ದು, ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಕೆ.ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ಸುಧಾಕರ ಶೆಣೈ ಖಂಡಿಗ, ಸುಭಾಶ್ಚಂದ್ರ ಶೆಟ್ಟಿ, ಜನಾರ್ದನ ಚೆಂಡ್ತಿಮಾರ್, ಕೆ.ರಮೇಶ ನಾಯಕ್, ಜಗದೀಶ ಕೊಯಿಲ, ಸುರೇಶ ಜೋರ, ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು.