Published On: Tue, Feb 28th, 2023

ಬಂಟ್ವಾಳ : 1960 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಅನುಷ್ಠಾನ: ಶಾಸಕ ನಾಯ್ಕ್

ಬಂಟ್ವಾಳ: ಕಳೆದ ನಾಲ್ಕೂ ವರ್ಷ 8 ತಿಂಗಳ ಶಾಸಕತ್ವದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಸುಮಾರು1960 ಕೋ.ರೂ.ಅನುದಾನ ಬಿಡುಗಡೆಗೊಳಿಸಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗಿದೆ‌ ಎಂದು ಬಂಟ್ವಾಳ‌ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು‌ ಅವರು ತಿಳಿಸಿದ್ದಾರೆ.


ಸೋಮವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ಬಂಟ್ವಾಳ ಕ್ಷೇತ್ರದ 1,706  ಫಲಾನುಭವಿಗಳಿಗೆ ವಿವಿಧ ಇಲಾಖೆಯಲ್ಲಿ ಮಂಜೂರಾದ ಸರಕಾರಿ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.

ತನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿರುವ ಕಟ್ಟಕಡೆಯ  ಜನರಿಗೆ ಸರಕಾರದ ವಿವಿಧ ಯೋಜನೆಯ ಸವಲತ್ತನ್ನು  ತಲುಪಿಸಿದಂತಹ ಸಮಾಧಾನ ಹೊಂದಿದ್ದೆನೆ ಎಂದ ಶಾಸಕ ರಾಜೇಶ್ ನಾಯ್ಕ್ ಎಲ್ಲಕ್ಕಿಂತಲು ಮುಖ್ಯವಾಗಿ ಯಾವುದೇ ಗೊಂದಲ,ಗಲಭೆಗಳಿಲ್ಲದೆ ಶಾಂತಿಯ ಬಂಟ್ವಾಳವನ್ನಾಗಿಸಿದ ನೆಮ್ಮದಿ,ಖುಷಿ, ತೃಪ್ತಿಯನ್ನು ಮನಸ್ಸಿಗೆ ಕೊಟ್ಟಿದೆ.ಇದಕ್ಕೆ ಸಹಕರಿಸಿ ಎಲ್ಲಾ ಇಲಾಖಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.


ಕೇಂದ್ರದ  ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಗಳಲ್ಲೊಂದಾದ ಪಿಎಂ ಕಿಸಾನ್ ಯೋಜನೆಯಡಿ ಬಂಟ್ವಾಳ ಕ್ಷೇತ್ರದಲ್ಲಿ 24,492 ರೈತರ ಖಾತೆಗೆ ನೇರವಾಗಿ ತಲಾ 10 ಸಾ.ರೂ.ವಿನಂತೆ 24 ಕೋ.ರೂ.ವಿಗೂ ಅಧಿಕ ನಗದು ಜಮೆಯಾಗಿದೆ. ಈ ಯೋಜನೆಯ 13ನೇ ಕಂತಿನ ಹಣವನ್ನು ಬಿಡುಗಡೆಗೊಳಿಸಿರುವುದನ್ನು ಸೋಮವಾರ ಪ್ರಧಾನಿಯವರು ಶಿವಮೊಗ್ಗದಲ್ಲಿ ಘೋಷಿಸಿದ್ದಾರೆ ಎಂದರು.


ಮುಂದಿನ ದಿನಗಳಲ್ಲಿ ಬಜೆಟ್ ನಲ್ಲಿ ಮುಖ್ಯಮಂತ್ರಿಯವರು ಪ್ರಕಟಿಸಿದಂತೆ ರೈತ ಕಾರ್ಮಿಕರಿಗೆ ತಿಂಗಳಿಗೆ 1000 ರೂ.ನಂತೆ ನೇರ ಖಾತೆಗೆ ಜಮಾಅಗಲಿದೆ. 1158 ಮನೆಗಳಿಗೆ ಬೆಳಕು ಯೋಜನೆಯಲ್ಲಿ ವಿದ್ಯುತ್  ಸಂಪರ್ಕ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ 1487 ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 60 ಕೋ.ರು.ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆ ಹಾಗು 40 ಕೋ.ರೂ.ವೆಚ್ಚದ ಎರಡನೇ ಹಂತದ ವಿಸ್ತರಿತ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು ಈ ಎರಡು ಯೋಜನೆ ಶೀಘ್ರದಲ್ಲೆ ಕಾರ್ಯಗತಗೊಳ್ಳಲಿದೆ. ಪುಂಜಾಲಕಟ್ಟೆಯಲ್ಲಿ  ಬ್ರಹ್ಮಶ್ರೀ‌ನಾರಾಯಣ ಗುರು ವಸತಿ ಶಾಲೆ ಆರಂಭಗೊಂಡಿದ್ದು, ಶೀಘ್ರದಲ್ಲಿ ಇದಕ್ಕೆಸುಮಾರು 30 ಕೋ.ರೂ.ವೆಚ್ಚದಲ್ಲಿ ಕಟ್ಟಡ ಹಾಗೂ ಪಂಜಾಲಕಟ್ಟೆ ಪ್ರಾ.ಆ.ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗಿದ್ದು, ಮುಂದಿನ ವಾರ ಈ ಎರಡು ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಅವರು ಬಂಟ್ವಾಳ ಕ್ಷೇತ್ರದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮತ್ತು ರೈತರ ಗದ್ದೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಲ್ಲಲ್ಲಿ ಚೆಕ್ ಡ್ಯಾಂ ಮತ್ತುಜಕ್ರಿಬೆಟ್ಟುವಿನಲ್ಲಿ 135 ಕೋ.ವೆಚ್ಚದಲ್ಲಿ ಡ್ಯಾಂ ಸಹಿತ ರಸ್ತೆ‌ನಿರ್ಮಾಣದ ಕಾಮಗಾರಿ‌  ಹಲವಾರು ಕಾಮಗಾರಿ ಪೂರ್ಣಗೊಂಡರೆ ಇನ್ನು ಕೆಲವು  ಪ್ರಗತಿಯಲ್ಲಿದೆ ಎಂದರು.


ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಉತ್ತಮ ವ್ಯವಸ್ಥೆಯೊಂದಿಗೆ ಐಸಿಯು ಬೆಡ್ ಸೇರಿದಂತೆ ಸುಸಜ್ಜಿತ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ.ತಾಲುಕು ಆಸ್ಪತ್ರೆ ಸಹಿತ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸಂದರ್ಭ ಜಿಲ್ಲೆಯಲ್ಲೇ ಮೊದಲಬಾರಿಗೆ ಆಮ್ಲಜನಕ ತಯಾರಿ ಘಟಕವನ್ನು‌ ಸ್ಥಾಪಿಸಲಾಗಿದೆ.ವಿವಿಧ ವಸತಿ ಯೋಜನೆಯಡಿಯಲ್ಲಿ 2000 ಕ್ಕು ಅಧಿಕ ಮನೆಗಳನ್ನು ಮಂಜೂರುಗೊಳಿಸಲಾಗಿದೆ ಎಂದು ಅವರು ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ವಿವಿಧ ಯೋಜನೆಯಲ್ಲಾಗಿರುವ ಅಭಿವೃದ್ಧಿ ಕೆಲಸಗಳ ರೀಪೂಟ್೯ ಕಾರ್ಡನ್ನು ಸಭೆಯ ಮುಂದಿಟ್ಟರು.


ವಿತರಿಸಲಾದ ಸವಲತ್ತುಗಳ ವಿವರ:
ಕಂದಾಯ ಇಲಾಖೆಗೆ ಸಂಬಂಧಿಸಿ‌ ಒಟ್ಟು 550 ಮಂದಿ ಫಲಾನುಭವಿಗಳಿಗೆ 94 ಸಿ ಮತ್ತು ಸಿಸಿ ಹಕ್ಕುಪತ್ರ,ಸಾಗುವಳಿ ಚೀಟಿ,
ದೇವರಾಜು ಅರಸು ನಿಗಮದಲ್ಲಿ 100 ಮಂದಿಗೆ ಗಂಗಕಲ್ಯಾಣ ಮತ್ತು ಸ್ವದ್ಯೋಗಕ್ಕಾಗಿ ಮಂಜೂರಾತಿಪತ್ರ,57 ಮಂದಿಗೆ ಅಲ್ಪಸಂಖ್ಯಾತ ನಿಗಮದಿಂದ ಗಂಗಾ ಕಲ್ಯಾಣ,ಶ್ರಮಶಕ್ತಿ,ಸ್ವದ್ಯೋಗ ಮಂಜೂರಾತಿ ಪತ್ರ,138 ಮಂದಿಗೆ ಕೈಗಾರಿಕೆಗಾಗಿ ಮಂಜೂರಾತಿ ಪತ್ರ,44 ಮಂದಿಗೆ ಮೀನಗಾರಿಕಾ ಇಲಾಖೆಯ ಮಸ್ತ್ಯಾಶ್ರಯ ಯೋಜನೆಯಡಿ ಮನೆ ಮಂಜೂರಾತಿ ಪತ್ರ,ಕಾರ್ಮಿಕ ಇಲಾಖೆಯಿಂದ 112 ಮಂದಿಗೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 24 ಮಂದಿ ಕೃಷಿ ಇಲಾಖೆಯಿಂದ 528 ಮಂದಿ ಹಾಗೂ ಪಶುಸಂಗೋಪನಾ ಇಲಾಖೆಯಿಂದ 39 ಮಂದಿ ಫಲಾನುಭವಿಗಳಿಗೆ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಆತ್ಮಯೋಜನೆಯ”ಹಸಿರೆಲೆ ಗೊಬ್ಬರ”ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.


ಅದೇ ರೀತಿ ಅಮೃತಯೋಜನೆಯಡಿ 12 ಲಕ್ಷ ರೂ.ವೆಚ್ಚದ ಕೃಷಿ ಅಭಿಯಾನಕ್ಕಾಗಿ ಬಂಟ್ವಾಳ ಬೊಲ್ಪು ರೈತ ಉತ್ಪಾದಕರ ಸಂಸ್ಥೆಗೆ ಟ್ರ್ಯಾಕ್ಟರನ್ನು ವಿತರಿಸಲಾಯಿತು.


ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಬೂಡಾ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ,ಅಕ್ರಮ ಸಕ್ರಮ ಸಮಿತಿ ಸದಸ್ಯ ರಮಾನಾಥ ರಾಯಿ,ತಹಶೀಲ್ದಾರ್ ದಯಾನಂದ ಕೆ.ಎಸ್.ಹಾಗೂ ವಿವಿಧ ಗ್ರಾ.ಪಂ.ನ ಅಧ್ಯಕ್ಷರು, ಉಪಾಧ್ಯಕ್ಷರು,ವಿವಿಧ ಇಲಾಖಾಧಿಕಾರಿಗಳು,ಕಂದಾಯಾಧಿಕಾರಿಗಳು ವೇದಿಕೆಯಲ್ಲಿದ್ದರು.ಉಪತಹಶೀಲ್ದಾರ್ ನವೀನ್ ಬೆಂಜನಪದವು ಸ್ವಾಗತಿಸಿ,ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter