ಮೂಡುಶೆಡ್ಡೆ ಗ್ರಾಮ ಪಂಚಾಯತ್‌ನ ಗ್ರಾಮಸಭೆ
ಕೈಕಂಬ : ಮೂಡುಶೆಡ್ಡೆ ಗ್ರಾಮ ಪಂಚಾಯತ್‌ನ ೨೦೨೨-೨೩ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಸೋಮವಾರ(ಫೆ. ೨೭) ಪಂಚಾಯತ್ ಅಧ್ಯಕ್ಷೆ ಜಯಶ್ರೀ ಅಧ್ಯಕ್ಷತೆಯಲ್ಲಿ ಮೂಡುಶೆಡ್ಡೆಯ ಶಿವಶಕ್ತಿ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಅವರು ನೋಡೆಲ್ ಅಧಿಕಾರಿಯಾಗಿದ್ದ ಗ್ರಾಮಸಭೆಯು `ನಾಡಗೀತೆ’ ಇಲ್ಲದೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು. ಕಂದಾಯ ಮತ್ತು ಮೆಸ್ಕಾಂ ಇಲಾಖೆಯ ಅಧಿಕಾರಿ ಹೊರತುಪಡಿಸಿ ಉಳಿದ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ಜೊತೆಗೆ ಗ್ರಾಮಸ್ಥರ ಸಂಖ್ಯೆಯೂ ಕ್ಷೀಣಿಸಿತ್ತು.
ಮೂಡುಶೆಡ್ಡೆಯ ನಿಸರ್ಗಧಾಮ ವಸತಿ ಪ್ರದೇಶದಲ್ಲಿ ಡ್ರೈನೇಜ್ ನೀರು ತೋಡಿನಲ್ಲಿ ಹರಿಯುತ್ತಿದ್ದು, ಎಲ್ಲೆಡೆ ದುರ್ವಾಸನೆ ಬೀರುತ್ತಿದ್ದರೆ, ಸೊಳ್ಳೆ ಕಾಟ ಹೆಚ್ಚಾಗಿದೆ. ಸೂಕ್ತ ಡ್ರ್ಯನೇಜ್ ನಿರ್ಮಿಸುವಂತೆ ಅರ್ಜಿ ಸಲ್ಲಿಸಿ ವರ್ಷವೇ ಸಂದರೂ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಮಹಿಳೆಯರು ದೂರಿದರು.
ಮನೆ ತ್ಯಾಜ್ಯ ನೀರು ನಿರ್ವಹಣೆಗೆ ಸರ್ಕಾರದ ೧೭,೦೦೦ ರೂ ನೆರವು ಪಡೆದು ಇಂಗುಗುಂಡಿ ನಿರ್ಮಿಸಲು ಅವಕಾಶವಿದೆ. ನಿಸರ್ಗಧಾಮದಲ್ಲಿ ಉಂಟಾಗಿರುವ ಡ್ರೈನೇಜ್ ಸಮಸ್ಯೆ ಶೀಘ್ರ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಿಡಿಒ ಜಯಪ್ರಕಾಶ್ ಹೇಳಿದರು.
ಮೂಡುಶೆಡ್ಡೆಯ ನಿಸರ್ಗಧಾಮದಲ್ಲಿ ಬಾವಿಯ ನೀರಿಗೆ ಡ್ರೈನೇಜ್ ಸಂಪರ್ಕ ನೀಡಲಾಗಿದ್ದು, ಸ್ಥಳೀಯ ನಿವಾಸಿಗರಿಗೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ಜನಾರ್ದನ ಎಂಬವರು ದೂರು ನೀಡಿದಾಗ, ನಿಯಮದ ಪ್ರಕಾರ ಅಧಿಕಾರಿಗಳು ಅಥವಾ ವಾರ್ಡ್ ಸದಸ್ಯರು ಉತ್ತರಿಸಬೇಕಿದ್ದರೂ, ಗ್ರಾಮಸ್ಥರಿಬ್ಬರು ಅಧಿಕಾರಿಗಳು ಮತ್ತು ದೂರುದಾರರಿಗೆ ಆಕ್ಷೇಪವೆತ್ತಿ ವರ್ಷಗಳಷ್ಟು ಹಳೆಯದಾದ ಜಟಿಲ ಸಮಸ್ಯೆಗೆ ಪರಿಹಾರ ಮರೀಚಿಕೆಯಂತಾಗಿಸಿದ ವಿಲಕ್ಷಣ ಪ್ರಸಂಗವೊAದು ನಡೆಯಿತು.
ಪಂಚಾಯತ್ ವ್ಯಾಪ್ತಿಯ ಎಲ್ಲ ಕಡೆಯಲ್ಲೂ ರಸ್ತೆ ನಿರ್ಮಾಣವಾಗಿದೆ. ಆದರೆ ನಿಸರ್ಗಧಾಮದ ನಗರದ ಒಂದು ಭಾಗದಲ್ಲಿ ರಸ್ತೆ ಇಲ್ಲ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದು, ರಸ್ತೆಗೆ ಅನುದಾನ ತೆಗೆದಿರಿಸಲಾಗುವುದು ಎಂದು ಪಂಚಾಯತ್ ಸದಸ್ಯ ಹರಿಪ್ರಸಾದ್ ಶೆಟ್ಟಿ ತಿಳಿಸಿದರು.
ಮೆಸ್ಕಾಂನ ವಾಮಂಜೂರು ಶಾಖಾಧಿಕಾರಿ ಡೆನ್ನಿಸ್ ಡಿ’ಸೋಜ, ಬೋಂದೆಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಆಶಾ, ಕಂದಾಯ ಇಲಾಖೆಯ ಲೆಕ್ಕಾಧಿಕಾರಿ ಉಮೇಶ್, ಮೂಡುಶೆಡ್ಡೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ್ ತಮ್ಮ ಇಲಾಖೆಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ ನೀಡಿದರು.
ಪಿಡಿಒ ಜಯಪ್ರಕಾಶ್ ಸ್ವಾಗತಿಸಿ, ೨೦೨೨-೨೩ನೇ ಸಾಲಿನ ಜಮಾ ಕರ್ಚು ವರದಿ ವಾಚಿಸಿದರು. ಪಂಚಾಯತ್ ಸಿಬ್ಬಂದಿ ಭಾರತಿ ಆಡಳಿತ ವರದಿ ಮತ್ತು ವಾರ್ಡ್ ಸಭೆಯ ನಡಾವಳಿ ವಾಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಅನಿಲ್ ಕುಮಾರ್, ಸದಸ್ಯರು, ಆಶಾ, ಆರೋಗ್ಯ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.