ಗುರುಪುರ ಗ್ರಾಮ ಪಂಚಾಯತ್ ಗ್ರಾಮಸಭೆ
ಕೈಕಂಬ: ಮೂಳೂರು ಮತ್ತು ಅಡ್ಡೂರು ಗ್ರಾಮಗಳನ್ನೊಳಗೊಂಡ ಗುರುಪುರ ಗ್ರಾಮ ಪಂಚಾಯತ್‌ನ ೨೦೨೨-೨೩ರ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಪಂಚಾಯತ್‌ನ ನೂತನ ಸಭಾಗೃಹದಲ್ಲಿ ಫೆ. ೨೦ರಂದು ನಡೆಯಿತು.
ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಗ್ರಾಮಸಭೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಭರತ್ ನೋಡೆಲ್ ಅಧಿಕಾರಿಯಾಗಿದ್ದರು. ಪಂಚಾಯತ್ ಪಿಡಿಒ ಪಂಕಜಾ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಇರ್ಶಾದ್ ವರದಿ ವಾಚಿಸಿದರು. ಉಪಾಧ್ಯಕ್ಷೆ ದಿಲ್ಶಾದ್, ಪಂಚಾಯತ್ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮೆಸ್ಕಾಂ ಹೆಚ್ಚುವರಿ
ಮೊತ್ತ ವಸೂಲಿ ?
ಗ್ರಾಮದಲ್ಲಿ ವಿದ್ಯುತ್ ಬಳಕೆದಾರರಿಗೆ ಬಳಸಿದ ವಿದ್ಯುತ್‌ಗಿಂತ ಹೆಚ್ಚುವರಿಯಾಗಿ ಫಿಕ್ಸ್ಡ್ ಡೆಪಾಸಿಟ್(ನಿರಖು ಠೇವಣಿ) ಹಾಗೂ ಬಡ್ಡಿ ಸಹಿತ ಬಾಕಿ ಮೊತ್ತದೊಂದಿಗೆ ಮೆಸ್ಕಾಂ ವಿದ್ಯುತ್ ಬಿಲ್ ಬರುತ್ತಿದೆ ಎಂದು ಹನೀಫ್ ಎಂಬವರು ದೂರಿದರು.
ಸಾಮಾನ್ಯವಾಗಿ ಇತರ ವಿದ್ಯುತ್ ಕಂಪೆನಿಗಳಂತೆ, ಮೆಸ್ಕಾಂ ನಿಯಮದನ್ವಯ ಗ್ರಾಹಕರಿಗೆ ವಿದ್ಯುತ್ ಬಿಲ್ ಮೊತ್ತ ನಿಗದಿಪಡಿಸಲಾಗಿದೆ. ಅಧಿಕ ವಿದ್ಯುತ್ ಬಳಕೆಯಾದಲ್ಲಿ ಮೊತ್ತ ಹೆಚ್ಚಾಗುತ್ತದೆ. ಒಂದೊಮ್ಮೆ ವಿನಾ ಕಾರಣ ಹೆಚ್ಚುವರಿ ಮೊತ್ತ ಬರುತ್ತಿದ್ದರೆ ಆ ಬಗ್ಗೆ ದೂರು ನೀಡಿದಲ್ಲಿ, ಮೇಲಧಿಕಾರಿಗಳಿಗೆ ಬರೆದು ಮಾಹಿತಿ ಪಡೆದುಕೊಳ್ಳಬಹುದು ಎಂದು ಗುರುಪುರ-ಕೈಕಂಬ ಮೆಸ್ಕಾಂ ಅಧಿಕಾರಿ ಲೋಕೇಶ್ ಹೇಳಿದರು.
ಜೆಜೆಎಂ ಕಳಪೆ ಕಾಮಗಾರಿ :
ಅಡ್ಡೂರು ಪ್ರದೇಶದಲ್ಲಿ ಜೆಜೆಎಂ ಕುಡಿಯುವ ನೀರು ಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ಕೊಳವೆ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಯೋಜನೆಯಡಿ ಮನೆಮನೆಗಳಿಗೆ ಶೀಘ್ರ ನೀರು ಪೂರೈಕೆಯಾಗುವ ಸಾಧ್ಯತೆ ಕಡಿಮೆ ಇದ್ದರೂ, ಇರುವ ಒಂದು ಟ್ಯಾಂಕ್ ಧ್ವಂಸ ಮಾಡಿ ಕಾಮಗಾರಿ ಮುಂದುವರಿಸಲಾಗಿದೆ. ಈಗ ಆ ಪ್ರದೇಶದವರಿಗೆ ನದಿಯಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಆ ಭಾಗದಲ್ಲಿ ಈವರೆಗೆ ನಡೆದಿರುವ ಜೆಜೆಎಂ ಕಾಮಗಾರಿ ಕಳಪೆಯಾಗಿದೆ. ಮಣ್ಣಿನ ಮೇಲೆಯೇ ನೀರಿನ ಕೊಳವೆ ಅಳವಡಿಸಲಾಗಿದೆ ಎಂದು ಗ್ರಾಮಸ್ಥರೊಬ್ಬರು ದೂರಿದರು.
ಕೇಂದ್ರದ ಜೆಜೆಎಂ, ಜಿಪಂ ಹಾಗೂ ಪಂಚಾಯತ್ ಮೂಲಕ ಗ್ರಾಮೀಣ ಭಾಗಗಳಲ್ಲಿ ಕಾರ್ಯಗತಗೊಳ್ಳುತ್ತಿದ್ದು, ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆಯ ಯೋಜನೆ ಇದಾಗಿದೆ. ಕಳಪೆ ಕಾಮಗಾರಿಯಾಗಿದ್ದರೆ, ಆ ಪ್ರದೇಶದಲ್ಲಿ ಪರಿಶೀಲನೆ ನಡೆಸಿ, ನಿರ್ದಿಷ್ಟ ಮಟ್ಟದಲ್ಲಿ ಕೊಳವೆ ಹಾದು ಹೋಗುವಂತೆ ಕಾಮಗಾರಿ ನಡೆಸಲಾಗುವುದು ಎಂದು ಜಿಪಂ ಸಹಾಯಕ ಇಂಜಿನಿಯರ್ ಪ್ರದೀಪ್ ಹೇಳಿದರು.
ಗ್ರಾಮಸಭೆಯಲ್ಲಿ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ನೀಡಲು ಅಧಿಕಾರಿಗಳೇ ಇಲ್ಲವಾದಲ್ಲಿ, ಅಂತಹ ಗ್ರಾಮಸಭೆಗೆ ಮಹತ್ವವಿದೆಯೇ ಎಂದು ಕೆಲವರು ಪ್ರಶ್ನಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಲಿನಿ, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್‌ರಾಜ್ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ಪಂಚಾಯತ್ ಕಾರ್ಯದರ್ಶಿ ಅಶೋಕ್ ವಂದಿಸಿದರು.