ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಸ್ವಾಮೀಜಿಯಿಂದ ಪ್ರಕಟ
ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕೆ ಸಚಿವ ಕೋಟ ೨೫ ಲ. ರೂ. ಮಂಜೂರು
ಗುರುಪುರ : ಬಿಲ್ಲವ, ಈಡಿಗ, ನಾಮಧಾರಿ ಸಹಿತ ೨೬ ಒಳಪಂಗಡಗಳ ಶ್ರೇಯೋಭಿವೃದ್ಧಿ ಹಿನ್ನೆಲೆಯಲ್ಲಿ ಕುಲಶಾಸ್ತ್ರ ಅಧ್ಯಯನಕ್ಕಾಗಿ ೨೫ ಲಕ್ಷ ರೂ ತೆಗೆದಿರಿಸಲು ನಿರ್ಧರಿಸಲಾಗುವುದು ಎಂದಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ತಕ್ಷಣದಿಂದಲೇ ಆ ಕೆಲಸ ಆರಂಭಿಸಲು ತನ್ನ ಇಲಾಖೆಗೆ ಆದೇಶ ನೀಡಿದ್ದಾರೆ ಎಂದು ಕಲಬುರಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ(ರಿ) ಇದರ ಪೀಠಾಧಿಪತಿ ಡಾ. ಶ್ರೀ. ಪ್ರಣವಾನಂದ ಸ್ವಾಮಿ ಅವರು ಹೇಳಿದರು.

ಮಂಗಳೂರಿನಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಹಿಂದುಳಿದ ವರ್ಗಗಳ ಸ್ಥಾನ ಪಡೆದುಕೊಂಡಿರುವ ಬಿಲ್ಲವ, ಈಡಿಗ, ನಾಮಧಾರಿ ಸಹಿತ ೨೬ ಒಳಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ(ಎಸ್‌ಟಿ) ಸೇರಿಸಬೇಕೆನ್ನುವ ಬೇಡಿಕೆಯ ಬಗ್ಗೆ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಚಿವ ಪೂಜಾರಿ ತಿಳಿಸಿದ್ದಾರೆ ಎಂದರು.
ಸಮಾಜದ ೨೬ ಒಳಪಂಗಡಗಳ ೧೩ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಶ್ರೀ ಪ್ರಣವಾನಂದ ಸ್ವಾಮಿ ಸಹಿತ ನೂರಾರು ಬಿಲ್ಲವ ಮುಖಂಡರು ಮಂಗಳೂರಿನಿಂದ ಬೆಂಗಳೂರಿಗೆ ಕೈಗೊಂಡ ಒಟ್ಟು ೪೦ ದಿನಗಳಲ್ಲಿ ೭೫೧ ಕಿಮೀ ಪಾದಯಾತ್ರೆ ಹಾಗೂ ಅಂತಿಮ ಹಂತದಲ್ಲಿ ಫ್ರೀಡಂ ಪಾರ್ಕ್ನಲ್ಲಿ ನಡೆಸಲಾದ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆಯಂತೆ ಸ್ಥಳಕ್ಕಾಗಮಿಸಿದ ಸಚಿವ ಶ್ರೀನಿವಾಸ ಪೂಜಾರಿಯವರು ಪಾದಯಾತ್ರೆ ಸಮಿತಿಯ ಮನವಿ ಸ್ವೀಕರಿಸಿ, ತನ್ನ ಇಲಾಖೆಯಿಂದ ಆಗುವ ಕೆಲಸಗಳು ತಕ್ಷಣದಿಂದ ಆರಂಭವಾಗಲಿದೆ ಎಂದು ಭರವಸೆ ನೀಡಿದ್ದಾರೆಂದರು.
ಉಳಿದಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ಸಮಾಜದ ತಲಾ ಮೂವರಿಗೆ ಟಿಕೆಟು ನೀಡಬೇಕು, ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ಪ್ರತ್ಯೇಕ ಅಭಿವೃಧಿ ನಿಗಮ ಮಂಡಳಿ ರಚಿಸಿ ೫೦೦ ಕೋ. ರೂ. ಮೀಸಲಿಡಬೇಕು, ರಾಜ್ಯಾದ್ಯಂತ ತಮ್ಮ ಕುಲ ಕಸುಬಾದ ಶೇಂದಿ ಇಳಿಸಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂಬಿತ್ಯಾದಿ ೧೩ ಬೇಡಿಕೆಗಳಿಗೆ ಸಚಿವರು ಪೂರಕ ಪ್ರತಿಕ್ರಿಯೆ ನೀಡಿದ್ದು, ಸ್ವಾಮೀಜಿಯವರು ಸಚಿವರು ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಸಮಾಜ ಬಾಂಧವರ `ಜೋಡೋ ಪಾದಯಾತ್ರೆ’ಯ ಮೂಲಕ ಸರ್ಕಾರ ಎಚ್ಚೆತ್ತುಕೊಂಡಿದೆ. ಇದರಿಂದ ಸಮಾಜದಲ್ಲಿ ಒಂದಿಷ್ಟು ಉತ್ತಮ ಬೆಳವಣಿಗೆಯಾಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ೧೨ರಂದು ನಗರದಲ್ಲಿ ಬಿಲ್ಲವ ಸಮಾಜದ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಅಂದು ಕೆಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ದ.ಕ ಜಿಲ್ಲಾ ಪಾದಯಾತ್ರೆ ಸಮಿತಿ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಸ್ವಾಗತಿಸಿ, ಪ್ರಸ್ತಾವಿಸಿದರು. ಬಿಲ್ಲವ ಮುಖಂಡರಾದ ಸುರೇಶ್ಚಂದ್ರ ಕೋಟ್ಯಾನ್, ಲೋಕನಾಥ ಪೂಜಾರಿ, ಚಂದ್ರಶೇಖರ, ವಿಷು ಕುಮಾರ್ ಉಡುಪಿ, ಸರ್ವೋತ್ತಮ, ಗೋಪಾಲಕೃಷ್ಣ ಬೆಂಗಳೂರು, ಅಕ್ಷಯ್ ಕುಮಾರ್ ಕಾರ್ಕಳ, ಬಾಲಕೃಷ್ಣ ಮಲ್ಪೆ, ಜಯರಾಮ ಪೂಜಾರಿ, ದಾಮೋದರ ಹೂಡೆ, ನೀಲಯ ಪೂಜಾರಿ ಮಳಲಿ ಮತ್ತಿತರರು ಉಪಸ್ಥಿತರಿದ್ದರು.