ವ್ಯಾಟಿಕನ್ ಸಿಟಿ: ಭಾರತದ ಕ್ರೈಸ್ತರ ಪಾಲಿಗೆ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಕ್ಷಣವೆಂದೇ ವ್ಯಾಖ್ಯಾನಿಸಲಾಗುತ್ತಿರುವ ವಿದ್ಯಮಾನವೊಂದಕ್ಕೆ ಇಂದು ವ್ಯಾಟಿಕನ್ ಸಿಟಿ ಸಾಕ್ಷಿಯಾಯಿತು. ಜಗತ್ತಿನ ರೋಮನ್ ಕ್ಯಾಥೋಲಿಕರ ಪರಮೋಚ್ಛ ಗುರು ಪೋಪ್ ಪ್ರಾನ್ಸಿಸ್ ಅವರು ಕೇರಳದ ಫಾದರ್ ಕುರಿಯಾಕೋಸ್ ಎಲಿಯಾಸ್ ಚವಾರ ಮತ್ತು ಸಿಸ್ಟರ್ ಯುಫ್ರಾಸಿಯಾ ಅವರಿಗೆ ಸಂತ ಪದವಿಯನ್ನು ನೀಡಿ ಗೌರವಿಸಿದ್ದಾರೆ. ಇನ್ನು ಮುಂದೆ ಇವರನ್ನು ಸೈಂಟ್ ಎಂದೇ ಕರೆಯಲಾಗುತ್ತದೆ.
ಸಂತ ಪದವಿ ನೀಡಬೇಕಾದರೆ ಅತ್ಯಂತ ಸುಧೀರ್ಘ ಪ್ರಕ್ರಿಯೆಗಳಿದ್ದು ಅದೆಲ್ಲವೂ ಮುಗಿದು ಇದೀಗ ಇವರಿಬ್ಬರನ್ನೂ ಸಂತ ಪದವಿಗೇರಿಸಲಾಗಿದೆ.
ಅನೇಕ ಶತಮಾನಗಳ ಇತಿಹಾಸವಿರುವ ಕೇರಳಸ ಸೈರೊ ಮಲಬಾರ್ ಚರ್ಚ್ ಇದೀಗ ಮೂವರು ಸಂತರನ್ನು ಹೊಂದಿದ ಕೀರ್ತಿಗೆ ಭಾಜನವಾಗಿದೆ. 2೦೦8ರಲ್ಲಿ ಆಗಿನ ಪೋಪ್ ಕೇರಳದ ಸಿಸ್ಟರ್ ಆಲ್ಫೋನ್ಸಾ ಅವರನ್ನು ಸಂತ ಪದವಿಗೇರಿಸಿದ್ದರು.
ಕೇರಳದ ಕ್ಯಾಥೋಲಿಕ್ ಸಮುದಾಯದ ನೇತಾರರ ದೊಡ್ಡ ಗಡಣವೇ ಇಂದು ವ್ಯಾಟಿಕನ್ ಸಿಟಿಯಲ್ಲಿ ಈ ಸಂಭ್ರಮದ ಕ್ಷಣಗಳನ್ನು ನೋಡಲು ಹೋಗಿದೆ. ಕೇಂದ್ರ ಸರ್ಕಾರವೂ ಸಹ ರಾಜ್ಯಸಭೆಯ ಉಪಸಭಾಪತಿ ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಅಧಿಕೃತ ನಿಯೋಗವನ್ನೂ ಸಹ ವ್ಯಾಟಿಕನ್ ಸಿಟಿಗೆ ರವಾನಿಸಿದೆ. ಕೇರಳದ ಕ್ಯಾಥೊಲಿಕ್ ಚರ್ಚ್‌ಗಳಲ್ಲಿ ಇಂದು ವಿಶೇಷ ಪೂಜೆಗಳು ನಡೆಯುತ್ತಿವೆ.
ಸಂತ ಕುರಿಯಾಕೋಸ್ ಚವಾರಾ
ಸಂತ ಕುರಿಯಾಕೋಸ್ ಚವಾರಾ ಹುಟ್ಟಿದ್ದು 1805ರಲ್ಲಿ. ಅಳಪ್ಪುರದ ಕೈನಾಕರಿ ಎಂಬಲ್ಲಿ ವಾಸವಾಗಿದ್ದ ಐಕೊ ಕುರಿಯಾಕೋಸ್ ಚವಾರ ಮತ್ತು ಮರಿಯಮ್ ತೊಪ್ಪಿಲ್ ಮಗನಾಗಿ ಜನಿಸಿದ್ದ ಇವರು 13ರ ಪ್ರಾಯದಲ್ಲೇ ಧಾರ್ಮಿಕ ಶಿಕ್ಷಣ ಪಡೆಯಲು ಆರಂಭಿಸಿದ್ದರು. 1829ರಲ್ಲಿ ದೀಕ್ಷೆ ಪಡೆದ ಸೈಂಟ್ ಕುರಿಯಾಕೋಸ್ ಚವಾರ 1861ರಲ್ಲಿ ವಿಕಾರ್ ಜನರಲ್ ಆಗಿ ನೇಮಿಸಲ್ಪಟ್ಟರು. ಕೇರಳದ ಸಮಾಜ ಸುಧಾರಕರ ದೊಡ್ಡ ಸಾಲಿನಲ್ಲಿ ಕುರಿಯಾಕೋಸ್ ಚವಾರ ಅವರದ್ದೂ ಸಹ ಮಂಚೂಣಿಯ ಹೆಸರು. ‘ಪ್ರತಿ ಇಗರ್ಜಿಗೂ ಒಂದು ಶಾಲೆ’ ಎಂಬುದು ಅವರ ಮಹತ್ವದ ಯೋಜನೆಯಾಗಿತ್ತು. ಈ ಯೋಜನೆಯಿಂದ ಕೇರಳದ ಎಲ್ಲ ಸಮುದಾಯಗಳ ಜನರಿಗೆ ಧರ್ಮ-ಜಾತಿ ಬೇದವಿಲ್ಲದೆ ಶಿಕ್ಷಣದ ಭಾಗ್ಯ ಸಿಗುವಂತಾಯ್ತು. 1871ರ ಜನವರಿ 3ರಂದು ಇಹಲೋಕ ತ್ಯಜಿಸಿದ ಕುರಿಯಾಕೋಸ್ ಚವಾರ ಅವರನ್ನು ಪರಮಪದಕ್ಕೇರಿಸುವ (ಬ್ಯಾಟಿಫಿಕೇಶನ್) ಪ್ರಕ್ರಿಯೆಯನ್ನು ಅಂದಿನ ಪೋಪ್ ಜಾನ್ ಪೌಲ್ ತಮ್ಮ 1984ರ ಭಾರತ ಭೇಟಿಯ ವೇಳೆ ಕೇರಳಕ್ಕೆ ಭೇಟಿ ನೀಡಿದಾಗ ಮಾಡಿದ್ದರು. ಸಂತ ಕುರಿಯಾಕೋಸ್ ಚವಾರ ಅವರ ಸಮಾಧಿ ಕೊಟ್ಟಾಯಂನ ಸೈಂಟ್ ಜೊಸೆಫ್ಸ್ ಸೈರೊ ಮಲಬಾರ್ ಚರ್ಚ್, ಮನ್ನನಮ್ ಎಂಬಲ್ಲಿದೆ.
ಸಂತ ಯುಫ್ರಾಸಿಯಾ ಎಲುವತ್ತಿಂಗಳ್
ಸಿಸ್ಟರ್ ಯುಫ್ರಾಸಿಯಾ ಎಲುವತ್ತಿಂಗಳ್ ತ್ರಿಶೂರ್ ಜಿಲ್ಲೆಯ ಎಡತುರುತ್ತಿ ಎಂಬಲ್ಲಿ 1877ರ ಅಕ್ಟೋಬರ್ 7ರಂದು ಜನಿಸಿದರು. ಅವರ ಮೂಲ ಹೆಸರು ರೋಸಾ ಎಲುವತ್ತಿಂಗಳ್. ತಾನು ಸೇವೆ ಮಾಡುತ್ತಿದ್ದ ಸುತ್ತಮುತ್ತಲಿನ ಜನತೆಗೆ ಪ್ರೀತಿಯ ‘ಯುಫ್ರಾಸಿಯಮ್ಮ’ ಆಗಿದ್ದ ಸಿಸ್ಟರ್ ಯುಫ್ರಾಸಿಯಾ ಜನರ ನೋವುಗಳಿಗೆ ಸ್ಪಂದಿಸುತ್ತಿದ್ದರು, ಅವರ ಕಷ್ಟಕ್ಕೆ ನೆರವಾಗುತ್ತಿದ್ದರು ಮತ್ತು ಆಧ್ಯಾತ್ಮ ಬೋಧನೆಗಳ ಮೂಲಕ ಜನರಿಗೆ ಹತ್ತಿರವಾಗಿದ್ದರು. ಆಗಸ್ಟ್ 29, 1952ರಲ್ಲಿ ದೈವಾಧೀನರಾದ ಯುಫ್ರಾಸಿಯಾ ಅವರ ಸಮಾಧಿ ತ್ರಿಶೂರಿನ ಸೈಂಟ್ ಮೇರಿಸ್ ಸೈರೊ ಮಲಬಾರ್ ಚರ್ಚ್, ಒಳ್ಳೂರು ಎಂಬಲ್ಲಿದೆ.
ಸಂತ ಕುರಿಯಾಕೋಸ್ ಚವಾರ ಮತ್ತು ಸಂತ ಯುಫ್ರಾಸಿಯಾ ಎಲುವಂತ್ತಿಂಗಳ್ ಇಬ್ಬರೂ ಕೇರಳದ ಸೈರೊ ಮಲಬಾರ್ ಚರ್ಚ್‌ಗೆ ಸೇರಿರುವುದು ಮತ್ತು ಏಕಕಾಲಕ್ಕೆ ಇಬ್ಬರನ್ನೂ ಸಂತ ಪದವಿಗೇರಿಸಲಾಗುತ್ತಿರುವುದು ಕ್ಯಾಥೊಲಿ ಕ್ರೈಸ್ತರ ಇತಿಹಾಸದಲ್ಲಿ ಅಪರೂಪದ ವಿದ್ಯಮಾನವಾಗಿದೆ.


