ಗುರುಪುರ ಪಂಚಾಯತ್‌ನಲ್ಲಿ ಜಿಮ್ ಕಟ್ಟಡ ಉದ್ಘಾಟನೆ
ಕೈಕಂಬ: ಗ್ರಾಮ ಅಭಿವೃದ್ಧಿಯಾಗಿದೆ ಎಂದರೆ ದೇಶ ಅಭಿವೃದ್ಧಿಯಾಗಿದೆ ಎಂದರ್ಥ. ಈ ನಿಟ್ಟಿನಲ್ಲಿ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳು ಹಾಗೂ ಮೂಲಸೌಕರ್ಯಗಳು ಬಹುತೇಕ ಕಾರ್ಯರೂಪಕ್ಕೆ ಬಂದಿದ್ದು, ಜನಪರ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬರುವಲ್ಲಿ ಸಹಕರಿಸಿದ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗಕ್ಕೆ ಅಭಿನಂದನೆಗಳು ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಗುರುಪುರ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ನಿರ್ಮಿಸಲಾದ ಒಟ್ಟು ೨೫ ಲಕ್ಷ ರೂ ವೆಚ್ಚದ(ಸೀಎಂ ಗ್ರಾಮ ವಿಕಾಸ ಯೋಜನೆಯ ೨೫ ಲ. ರೂ., ೧೫ನೇ ಹಣಕಾಸು ಯೋಜನೆಯ ೫ ಲ. ರೂ. ಹಾಗೂ ೩ ಲ. ರೂ) ಗರಡಿಮನೆ(ಜಿಮ್) ಮತ್ತು ಸಭಾಭವನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಕಾಂಜಿಲಕೋಡಿಯಲ್ಲಿ ೫ ಲಕ್ಷ ರೂ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೊಳ್ಳಲಿದೆ. ಅಂತೆಯೇ, ಮೂಳೂರು ಗ್ರಾಮದ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದ ಬಳಿ ಇರುವ ಕೆರೆ ಹಾಗೂ ಚಿಲಿಂಬಿಗುಡ್ಡೆಯ ಕೆರೆ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದರು.
ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಮಾತನಾಡಿ, ಶಾಸಕರ ಸಹಕಾರವಿದ್ದಲ್ಲಿ ಇಲ್ಲಿ ಸರ್ಕಾರಿ ಪ್ರತಿಯೊಂದು ಯೋಜನೆಗಳು ಯಥಾವತ್ತಾಗಿ ಕಾರ್ಯರೂಪಕ್ಕೆ ಬರಲಿವೆ. ಇದಕ್ಕೆ ಜನರ ಸಹಕಾರವೂ ಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್, ಸದಸ್ಯರಾದ ಜಿ. ಎಂ. ಉದಯ ಭಟ್, ರಾಜೇಶ್ ಸುವರ್ಣ, ಸಚಿನ್ ಅಡಪ, ಕೆ. ಸದಾಶಿವ ಶೆಟ್ಟಿ, ಸುನಿಲ್ ಪೂಜಾರಿ ಚಿಲಿಂಬಿಗುಡ್ಡೆ, ಬಾಲಕೃಷ್ಣ ಪೂಜಾರಿ, ಶಶಿಕಲಾ, ಬಬಿತಾ, ನಳಿನಿ ಶೆಟ್ಟಿ, ರೆಹನಾ, ಮರಿಯಮ್ಮ, ಅಝ್ಮಿನಾ, ಸಂಪಾ, ಸಫರಾ, ಅಶ್ರಫ್, ಸಾಹಿಕ್ ಮತ್ತು ಗುರುಪುರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕರ ವಿ. ಶೆಟ್ಟಿ, ಬಿಜೆಪಿ ಮುಖಂಡ ಸುಧೀರ್ ಕಾಮತ್ ಗುರುಪುರ, ಪಂಚಾಯತ್ ಸಿಬ್ಬಂದಿ ವರ್ಗ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು. ಪಿಡಿಒ ಪಂಕಜಾ ಅವರು ಸ್ವಾಗತಿಸಿ ಪ್ರಸ್ತಾವಿಸಿದರೆ, ಪಂಚಾಯತ್ ಕಾರ್ಯದರ್ಶಿ ಅಶೋಕ್ ವಂದಿಸಿದರು.