ಬಂಟ್ವಾಳ: ಪರಶುರಾಮ ಋಷಿ ತಪೋಭೂಮಿಗೆ ಹೊಸ ಕಾಯಕಲ್ಪ ಕಾಡಬೆಟ್ಟು ಪಿಲಿಂಗಾಲು ‘ಶ್ರೀ ಗಾಯತ್ರಿ ದೇವಿ ದೇವಸ್ಥಾನ’ ಜೀರ್ಣೋದ್ದಾರ.
ಬಂಟ್ವಾಳ:ಪರಶುರಾಮ ಋಷಿ ತಪಸ್ಸು ಮಾಡಿದ ಪುಣ್ಯ ತಪೋಭೂಮಿ ಎಂದೇ ಗುರುತಿಸಿಕೊಂಡ ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನವು ರೂ 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಮತ್ತೆ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿದೆ.
ಇಲ್ಲಿನ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ತನ್ನ 16 ನೇ ವಯಸ್ಸಿನಲ್ಲೇ ದೇವರ ಪ್ರೇರಣೆಯಂತೆ ಈ ಗುಡ್ಡ ಪ್ರದೇಶದಲ್ಲಿ ಪುಟ್ಟ ಗುಡಿ ನಿರ್ಮಿ ಸಿ ದೇವರ ಭಜನೆ ಆರಂಭಿಸಿದ್ದರು. 18ನೇ ವಯಸ್ಸಿನಲ್ಲಿ ಮಂತ್ರಾಲಯಕ್ಕೆ ತೆರಳಿ 28 ವರ್ಷಗಳ ಕಾಲ ವಿವಿಧ ವೈದಿಕ ಮತ್ತು ಆಧ್ಯಾತ್ಮಿಕ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಇದೇ ವೇಳೆ ಜ್ಯೋತಿಷ್ಯ ಮತ್ತು ನಾಟಿವೈದ್ಯ ಪದ್ಧತಿ ಕರಗತ ಮಾಡಿಕೊಂಡ ಇವರು ಶ್ರೀ ಗಾಯತ್ರಿ ದೇವಿಗೆ ಸುಂದರ ಗರ್ಭಗುಡಿ ನಿರ್ಮಿಸಿ, ಕಳೆದ 2006ನೇ ಮಾ.31ರಂದು ಭಕ್ತರ ನೆರವಿನಲ್ಲಿ ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರ ಮೂಲಕ ದೇವರ ಶಿಲಾ ವಿಗ್ರಹ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನೆರವೇರಿಸಿದ್ದಾರೆ.
ಹಿಂದುಳಿದ ವರ್ಗ ಗಾಣಿಗ ಸಮಾಜದಲ್ಲಿ ಜನಿಸಿದ ಕೆ.ಎಸ್.ಪಂಡಿತರು ಬ್ರಹ್ಮಚಾರಿಯಾಗಿ ತನಗೆ ಪೂರ್ವಾಶ್ರಮದಿಂದ ದೊರೆತ ಜಮೀನಿನಲ್ಲಿ ತೆಂಗು, ಕಂಗು, ಬಾಳೆ ಕೃಷಿ ಜೊತೆಗೆ ಪುಟ್ಟ ‘ಗೋಶಾಲೆ’ ನಿರ್ಮಿಸಿ ಹೈನುಗಾರಿಕೆ ಮೂಲಕ ಏಕಾಂಗಿ ಪರಿಶ್ರಮದಿಂದ ದೇವಳಕ್ಕೆ ಸುತ್ತುಗೋಪುರ ನಿರ್ಮಿಸಿದ್ದಾರೆ. ದೇವರಿಗೆ ಪ್ರತೀ ನಿತ್ಯ ತ್ರಿಕಾಲ ಪೂಜೆ ಸಹಿತ ಹಠಯೋಗದ ಮೂಲಕ ಧ್ಯಾನಾಸಕ್ತರಾಗಿ ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿದ್ದಾರೆ.
ಇನ್ನೊಂದೆಡೆ ದೇವಳಕ್ಕೆ ಮುಖಮಂಟಪ, ಮಹಾಗಣಪತಿ ಗುಡಿ, ರಾಘವೇಂದ್ರ ಸ್ವಾಮಿ ಗುಡಿ, ನಾಗನಕಟ್ಟೆ, ಪಂಜುರ್ಲಿ ದೈವಸ್ಥಾನ ನಿರ್ಮಾ ಣ ಕಾಮಗಾರಿಯೂ ಭಕ್ತರ ನೆರವಿನಲ್ಲಿ ನಡೆಯುತ್ತಿದೆ.
ಕಳೆದ 48 ವರ್ಷಗಳಿಂದ ವಾರ್ಷಿಕ ಭಜನಾ ಮಂಗಳೋತ್ಸವ, 16 ವರ್ಷಗಳಿಂದ ಪ್ರತಿಷ್ಠಾ ವರ್ಧಂತಿ ಉತ್ಸವ, ಗಾಯತ್ರಿ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಮೂಹಿಕ ಆಶ್ಲೇಷ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ ತಿಳಿಸಿದ್ದಾರೆ.
ಫೆ.8ರಿಂದ 10ರತನಕ ತಂತ್ರಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಮಹಾ ಗಣಪತಿ ವಿಗ್ರಹ ಮತ್ತು ಗುರು ರಾಘವೇಂದ್ರ ಸ್ವಾಮಿ ಬಿಂಬ ಪ್ರತಿಷ್ಠೆ ಸಹಿತ ಗಾಯತ್ರಿ ದೇವಿಗೆ ಬ್ರಹ್ಮಕಲಶೋತ್ಸವ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರತಿಕ್ರಿಯಿಸಿದ್ದಾರೆ.
ಕೆಲವೊಂದು ತಾಂತ್ರಿಕ ಕಾರಣಗಳಿಂದ ಸಂಪೂರ್ಣ ಹದಗೆಟ್ಟಿರುವ ಇಲ್ಲಿನ ಸಂಪರ್ಕ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದ್ದು, ಈಗಾಗಲೇ ಕಿಂಡಿ ಅಣೆಕಟ್ಟೆ ನಿಮರ್ಾಣಗೊಂಡಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭರವಸೆ ನೀಡಿದ್ದಾರೆ.
ಈ ಗ್ರಾಮೀಣ ಪ್ರದೇಶದ ಸುಂದರ ಮತ್ತು ಅಪರೂಪದ ಗಾಯತ್ರಿ ದೇವಸ್ಥಾನ ಅಭಿವೃದ್ಧಿಗೆ ಭಕ್ತರಿಂದ ಪಕ್ಷಾತೀತ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ತಿಳಿಸಿದ್ದಾರೆ.