ಕಾರ್ಕಳ: ಮನೆಗೆ ಕನ್ನ ಹಾಕಿ ಲಕ್ಷಾಂತರ ನಗನಗದು ಕಳವು – ಆರೋಪಿಗಳಿಗೆ ನ್ಯಾಯಾಂಗ ಬಂಧನ
ಕಾರ್ಕಳ: ಮನೆಗೆ ಕನ್ನ ಹಾಕಿ ಲಕ್ಷಾಂತರ ನಗನಗದು ಕಳವು-ಆರೋಪಿಗಳಿಗೆ ನ್ಯಾಯಾಂಗ ಬಂಧನ

ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಲಕ್ಷಾಂತರ ರೂ ಮೌಲ್ಯದ ನಗನಗದು ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಟ್ವಾಳ ತಾಲೂಕು ಕಾಂತರಬೆಟ್ಟು, ಅರಂಬೋಡಿ ಗ್ರಾಮದ ನಿವಾಸಿ ಆರೋಪಿ ಪ್ರಸಾದ್ @ ಪಚ್ಚು (34) ಹಾಗೂ ಸಹಕಾರ ನೀಡಿದ ಆರೋಪಿತೆ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ನಿವಾಸಿ ಶಿಬಾ(39) ಬಂಧಿತ ಆರೋಪಿಗಳು. ಘಟನೆಯ ವಿವರ ಡಿ. 03 ರಂದು ರಾತ್ರಿ 08-30 ರಿಂದ 10:00 ಗಂಟೆಯ ಮದ್ಯೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದ ಉಷಾ ಜಗದೀಶ್ ಅಂಚನ್ ಎಂಬವರ ಮನೆಯ ಬಾಗಿಲನ್ನು ಕಳ್ಳರು ಮುರಿದು ಒಳ ಪ್ರವೇಶಿಸಿ ಕೊಠಡಿಯಲ್ಲಿದ್ದ ಗೋದ್ರೇಜ್ನ ಬೀಗ ಮುರಿದು ಒಳಗಿದ್ದ ರೂ 9,75,000/-ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ರವರ ತಂಡವು ಡಿ. 21 ರಂದು ಪ್ರಕಣದ ಆರೋಪಿಗಳನ್ನು ಬಂಧಿಸಿದ್ದಾರೆ.ದಸ್ತಗಿರಿಯಾದ ಇಬ್ಬರು ಆರೋಪಿಗಳಿಂದ ಕಳ್ಳತನವಾಗಿದ್ದ ರೂ 9,75,000/- ರೂ ,ಮೌಲ್ಯದ 216 ಗ್ರಾಂ ಬಂಗಾರದ ಒಡವೆಗಳು ಮತ್ತು 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಲಾಗಿದೆ.

ಆರೋಪಿ ಪ್ರಸಾದ್ @ ಪಚ್ಚು ಎಂಬವನ ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡಬಿದ್ರಿ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡಬಿದ್ರೆ ಠಾಣೆಯಲ್ಲಿ ಸುದರ್ಶನ ಜೈನ್ ಎಂಬವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಫೋಕ್ಸೋ ಪ್ರಕರಣಗಳು ದಾಖಲಾಗಿದ್ದವು. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.