ಸಂಕೊಳಿಗೆ: ಪ್ರಮುಖ ಬೇಡಿಕೆಗಳ ಆಗ್ರಹಿಸಿ ತೀಯಾ ಸಮಾಜದ ವಿವಿಧ ಕ್ಷೇತ್ರದ ಪ್ರಮುಖರ ಸಮಾಲೋಚನಾ ಸಭೆ, ಸಾಧಕ ಬಾಂಧವರಿಗೆ ಸನ್ಮಾನ
ಸಂಕೊಳಿಗೆ: ಭಾರತೀಯ ತೀಯಾ ಸಮಾಜ ಉಳ್ಳಾಲ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಆಗ್ರಹಿಸಿ ತೀಯಾ ಸಮಾಜ ಬಾಂಧವ ಪ್ರಮುಖರ ಸಮಾಲೋಚನಾ ಸಭೆ ಉಚ್ಚಿಲ ಸಂಕೊಳಿಗೆ ಶ್ರೀ ಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ, ರಾಜ್ಯ ಪ್ರತಿಪಕ್ಷ ಉಪ ನಾಯಕ, ಯು.ಟಿ. ಖಾದರ್ ರವರಿಗೆ ತೀಯಾ ಸಮಾಜದ ವತಿಯಿಂದ, ಸಮುದಾಯ ಭವನ ಸೇರಿದಂತೆ, ಮೂರು ಪ್ರಮುಖ ಬೇಡಿಕೆಗಳನ್ನು ಪೂರೈಸುವಂತೆ ಮನವಿ ಸಲ್ಲಿಸಲಾಯಿತು.

ಮನವಿಗೆ ಸ್ಪಂದಿಸಿ ಮಾತನಾನಾಡಿದ ಯು. ಟಿ. ಖಾದರ್, ನಾನು ಶಾಸಕನಾಗಿ, ಮಂತ್ರಿಯಾಗಿ ಮುಂದುವರಿಯಬೇಕಾದರೆ ತೀಯಾ ಸಮಾಜದ ಬಹಳ ದೊಡ್ಡ ಕೊಡುಗೆ ಇದೆ.
ತೀಯಾ ಸಮಾಜದಲ್ಲಿ ಎಲ್ಲ ರೀತಿಯ ಪ್ರತಿಭಾವಂತರಿದ್ದಾರೆ, ನೀವೇನು ಬೇಡಿಕೆ ಇಟ್ಟಿದ್ದೀರೋ ಅದನ್ನು ಆದಷ್ಟು ಪೂರೈಸುವ ಕೆಲಸ ಎಲ್ಲರೊಂದಿಗೆ ಸಮಾಲೋಚಿಸಿ ಮಾಡುವ, ಇಷ್ಟರವರೆಗೆ ಏನೇನು ಬೇಡಿಕೆ ಇಟ್ಟಿದ್ದೀರೋ, ಅದರಲ್ಲಿ ಬಹಳಷ್ಟನ್ನು ಪೂರೈಸಿದ್ದೇನೆ ಎಂಬ ವಿಶ್ವಾಸ ನನಗಿದೆ, ಈ ರಾಜ್ಯದ ಸಂಪತ್ತು, ಅದು, ಒಂದೆರಡು ಸಮುದಾಯಕ್ಕೆ ಸೀಮಿತ ಅಲ್ಲ, ಅದು ಎಲ್ಲ ಸಮುದಾಯ, ಪಂಗಡದವರಿಗೆ ಸೇರಿದ್ದು, ಹಾಗೆಯೇ ನಿಮ್ಮದೇ ಆದ ಪ್ಯಾರಾ ಮೆಡಿಕಲ್ ಕಾಲೇಜನ್ನು ಪ್ರಾರಂಭಿಸಿ, ನಾಳೆ ಕಲಿತ ನಂತರ ಎಲ್ಲಿ ಹೋದರೂ ಕೆಲಸ ಸಿಗುವಂತಾಗಬೇಕು, ನಾವು ಇಷ್ಟೆಲ್ಲಾ ಮಾಡುವುದು ನೆಮ್ಮದಿಯ ಬದುಕಿಗಾಗಿ, ನೆಮ್ಮದಿಗಾಗಿ ಸೌಹಾರ್ದತೆ, ಸಹೋದರತೆ ಬೇಕಾಗಿದೆ, ಎಲ್ಲರೂ ಒಟ್ಟಾಗಿ ಹೋಗುವಂತಹ ಸಮಾಜವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ತೀಯಾ ಸಮಾಜ ಕೇಂದ್ರ ಸಮಿಯಿ ಅಧ್ಯಕ್ಷ ಸದಾಶಿವ ಉಳ್ಳಾಲ್ ತೀಯಾ ಸಮಾಜವನ್ನು ಗುರುತಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಯಾವುದೇ ಸಮಸ್ಯೆ ಬಂದಾಗ ನಾವು ಪಕ್ಷ ಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಯು.ಟಿ. ಖಾದರ್ ಬೇರೆ ಬೇರೆ ಕಡೆಗಳಲ್ಲಿ ನಮಗೆ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ಆದರೆ ಇಲ್ಲಿಯೂ ಸಮುದಾಯ ಭವನಕ್ಕೆ ನಮಗೆ ಸಹಕಾರ ಬೇಕಾಗಿದೆ. ಹಾಗೇಯೆ ನಮ್ಮದೇ ಆದ ನಿಗಮ ಸ್ಥಾಪನೆಗೆ ಖಾದರ್ ವಿಶೇಷ ಮುತುವರ್ಜಿ ಮಾಡಬೇಕು
ಎಂದು ತಿಳಿಸಿದರು.
ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ಸಮಾಜದ ಮುಖಂಡರಾದ ತೋನ್ಸೆ ಪುಷ್ಕಳ್ ಕುಮಾರ್, ಸುರೇಶ್ ಭಟ್ನಗರ್, ಯಶವಂತ ಉಳ್ಳಾಲ್, ಸವಿತಾ ತಲಪಾಡಿ, ದೇವದಾಸ್ ಕೊಲ್ಯ ಹಾಗೂ ಉಮೇಶ್ ಬೆಂಜನಪದವು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜ ಬಾಂಧವರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿವೈದ್ಯ ಗಣೇಶ್ ಪಂಡಿತ್ ಮುಳಿಹಿತ್ಲು, ಸಹಕಾರ ಸಂಘಕ್ಕೆ ಸಂಬಂಧಿಸಿದ ಎಚ್ ಡಿಎಂಸಿ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ವಿಜೇತೆ, ಜಪ್ಪು ಭಗವತೀ ಬ್ಯಾಂಕ್ ಸಿಬ್ಬಂದಿ ಯಶವಂತಿ ಜಪ್ಪು ಹಾಗೂ ಹೈಜಂಪ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಸೃಜನ್ ಜನಾರ್ಧನ್ ಹಾಗೂ
ತೀಯಾ ಸಮಾಜಕ್ಕೆ ಖಾದರ್ ಅವರು ನೀಡಿದ ಕೊಡುಗೆಯನ್ನು ಪರಿಗಣಸಿ ಸನ್ಮಾನಿಸಲಾಯಿತು.
ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ
ದಿನೇಶ್ ಕುಂಪಲ ಸ್ವಾಗತಿಸಿ, ಪ್ರಾಸ್ತಾವನೆಗೈದರು. ತೀಯಾ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಯಶವಂತಿ ಜೆ. ಉಚ್ಚಿಲ್ ವರದಿ ವಾಚಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.