ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ, ಭಯೋತ್ಪಾದಕರನ್ನು ಪೊಲೀಸರು ಮಟ್ಟ ಹಾಕಿ: ಡಾ.ಪ್ರಭಾಕರ ಭಟ್
ಬಂಟ್ವಾಳ: ತಾಲ್ಲೂಕಿನ ನಂದಾವರ ಕ್ಷೇತ್ರದಲ್ಲಿ ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನ ನಾಗುರಿ ಎಂಬಲ್ಲಿ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಸ್ಪೋಟ ಪ್ರಕರಣ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ವ್ಯವಸ್ಥಿತ ಜಾಲ ಪತ್ತೆ ಹಚ್ಚಿ ಭಯೋತ್ಪಾದಕರನ್ನು ಪೊಲೀಸರು ಮಟ್ಟ ಹಾಕಬೇಕು ಎಂದು ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಆಗ್ರಹಿಸಿದ್ದಾರೆ.
ಇಲ್ಲಿನ ನಂದಾವರ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ಜಿಲ್ಲೆಯಲ್ಲಿ ಕೂಡಾ ಭಯೋತ್ಪಾದಕರ ತಾಣವಾಗುತ್ತಿರುವುದು ದುರ್ದೈವ ಎಂದರು. ರಾಜ್ಯದಲ್ಲಿ ಪಿಎಫ್ ಐ ಮತ್ತು ಸಿಎಫ್ ಐ ಮತ್ತಿತರ ಸಂಘಟನೆ ನಿಷೇಧಗೊಳಿಸಿದ್ದರೂ ರಸ್ತೆ ಮೇಲಿನ ಉಗ್ರ ಬರಹ ಕಂಡು ಬಂದಿರುವುದು ಅವರ ಮಾನಸಿಕ ಭಯೋತ್ಪಾದಕತೆ ದೂರವಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು, ಶಿವಮೊಗ್ಗ ದ ಹರ್ಷ ಹತ್ಯೆ ಪ್ರಕರಣ ಇದಕ್ಕೆ ಪುಷ್ಠಿ ನೀಡುತ್ತಿದೆ ಎಂದರು.
ಹಿಂದೂ ಎಂಬ ಶಬ್ಧ ಅಶ್ಲೀಲ ಎಂದಿರುವ ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ಮತ್ತಿತರ ಬುದ್ಧಿ ಜೀವಿಗಳು ಕುಕ್ಕರ್ ಬಾಂಬ್ ಸ್ಪೋಟ, ಶ್ರದ್ಧಾ ಹತ್ಯೆ ಮಾಡಿ ತುಂಡರಿಸಿದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಅವರು ಟೀಕಿಸಿದರು. ಮೂರ್ತಿ ಪೂಜೆ ವಿರೋಧಿಸುವ ಮುಸ್ಲಿಮರ ಓಲೈಕೆಗಾಗಿ ಟಿಪ್ಪು ವಿಗ್ರಹ ಮಾಡಲು ಹೊರಟಿರುವುದು ನಾಚಿಕೆಗೇಡು ಎಂದು ಅವರು ಲೇವಡಿ ಮಾಡಿದರು.