ಅಲ್ಲಿಪಾದೆ: ಜನಸ್ಪಂದನಾ ಕಾರ್ಯಕ್ರಮ, ೪೧೭ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ
ಬಂಟ್ವಾಳ: ಜನರ ಅನಗತ್ಯ ಅಲೆದಾಟ ತಪ್ಪಿಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಸರ್ಕಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರ ಸಭಾಂಗಣದಲ್ಲಿ ಸೋಮವಾರ ನಡೆದ ಸರಪಾಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಹಶೀಲ್ದಾರ್ ಡಾ.ಸ್ಮಿತಾ ರಾಮು ಮಾತನಾಡಿದರು. ಸರಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳಿ ಪಂಚಾಯಿತಿ ಅಧ್ಯಕ್ಷ ಸುರೇಶ್ ಮೈರ, ಮಣಿನಾಲ್ಕೂರು ಪಂಚಾಯಿತಿ ಅಧ್ಯಕ್ಷ ನಾಗವೇಣಿ, ಕಾವಳಮೂಡೂರು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಙಾನೇಶ್ ಸಹಿತ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಇದೇ ವೇಳೆ ಸುಮಾರು ೪೧೭ ಮಂದಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಮತ್ತು ಆದೇಶಪತ್ರ ವಿತರಿಸಲಾಯಿತು.
ಇಲ್ಲಿನ ಚರ್ಚಿನ ಆಡಳಿತ ಮಂಡಳಿ ಮತ್ತು ರಿಕ್ಷಾ ಚಾಲಕ-ಮಾಲೀಕರ ಸಂಘದ ಸದಸ್ಯರ ನಡುವೆ ಪದೇ ಪದೇ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ಜಮೀನು ಸಮಸ್ಯೆ ಬಗ್ಗೆ ಪೊಲೀಸರು ಗಮನ ಹರಿಸುವಂತೆ ಶಾಸಕರು ಸೂಚಿಸಿದರು. ಜನಸ್ಪಂದನ ಕಾರ್ಯಕ್ರಮಕ್ಕೆ ಗೈರು ಹಾಜರಾದ ನಾವೂರು ಗ್ರಾಮ ಪಂಚಾಯಿತಿ ಪಿಡಿಒ ವಿರುದ್ದ ಶಾಸಕರಿಗೆ ಸದಸ್ಯರು ದೂರು ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಇ.ಒ ರಾಜಣ್ಣ ಸ್ವಾಗತಿಸಿ, ಸರಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ ಶೆಟ್ಟಿ ವಂದಿಸಿದರು. ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.