ಕಾಶಿ-ತಮಿಳು ಸಂಗಮ; ಶರ್ಟ್, ಪಂಚೆ ಧರಿಸಿ ಮಿಂಚಿದ ಮೋದಿ
ಚೆನ್ನೈ: ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಸಹಯೋಗದಲ್ಲಿ ವಿವಿಯ ಆಂಫಿಥಿಯೇಟರ್ ಮೈದಾನದಲ್ಲಿ ಶಿಕ್ಷಣ ಸಚಿವಾಲಯವು ಹಮ್ಮಿಕೊಂಡಿರುವ ಒಂದು ತಿಂಗಳ ‘ಕಾಶಿ-ತಮಿಳು ಸಂಗಮ’ ಸಾಂಸ್ಕೃತಿಕ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಚಾಲನೆ ನೀಡಿದ್ದಾರೆ.

51ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳ ಈ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ (Naredndra Modi) ಅವರೂ ಸಾಂಪ್ರದಾಯಿಕ ಉಡುಗೆಯಲ್ಲೇ ಆಗಮಿಸಿ ಗಮನ ಸೆಳೆದಿದ್ದಾರೆ. ಶ್ವೇತ ವರ್ಣದಲ್ಲಿ ಕಂಗೊಳಿಸುವ ಬಿಳಿಯ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
`ಕಾಶಿ-ತಮಿಳು ಸಂಗಮ’ ಕಾರ್ಯಕ್ರಮವು ತೀರ್ಥಯಾತ್ರಿಕರ ಪುಣ್ಯಸ್ಥಳ ಕಾಶಿ ಹಾಗೂ ತಮಿಳುನಾಡಿನ ಸಂಬಂಧವನ್ನು ಪುನರುಜ್ಜೀವನಗೊಳಿಸುವ ಹಾಗೂ ಕೇಂದ್ರ ಸರ್ಕಾರದ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯನ್ನು ಎತ್ತಿಹಿಡಿಯುವ ಗುರಿಯನ್ನೂ ಹೊಂದಿದೆ. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಅವರಿಂದು ‘ತಿರುಕ್ಕುರಲ್ ಮತ್ತು ಕಾಶಿ ತಮಿಳು’ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಬಳಿಕ ತಮಿಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಂತರ ತಮಿಳುನಾಡಿನ ಮಠ, ದೇವಾಲಯಗಳಿಗೆ ಗೌರವ ಸಲ್ಲಿಸಿ, ಗುರುಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉತ್ತರಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೊದಲಾದವರು ಉಪಸ್ಥಿತರಿದ್ದರು.
ಈ ಉತ್ಸವದಲ್ಲಿ ಒಟ್ಟು 51 ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿದ್ದು, ಶಿವ ಪುರಾಣ, ರಾಮಾಯಣ ಮತ್ತು ಮಹಾಭಾರತ ಪೌರಾಣಿಕ, ಐತಿಹಾಸಿಕ ನಾಟಕವನ್ನು ಆಧರಿಸಿದ ಬೊಂಬೆ ಪ್ರದರ್ಶನ ನಡೆಯಲಿದೆ. ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವ ಈ ಉತ್ಸವಕ್ಕೆ 2,500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ.