Published On: Fri, Nov 11th, 2022

ಸಂಕೀರ್ಣದ ಕೊಳಚೆ ನೀರು ನೇರ ಚರಂಡಿಗೆ : ಆಡಳಿತ ಪಕ್ಷದ ಸದಸ್ಯನಿಂದಲೇ ಧರಣಿಯ ಎಚ್ಚರಿಕೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ  ಬಹುತೇಕ  ವಸತಿ ಸಂಕೀರ್ಣಗಳಲ್ಲಿ‌  ಸೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್ ( ಎಸ್ ಟಿ.ಪಿ) ಇಲ್ಲದಿದ್ದು, ಸಂಕೀರ್ಣದ ಕೊಳಚೆ  ನೀರು ನೇರ ಚರಂಡಿಗೆ ಹರಿದು ನೇತ್ರಾವತಿ ನದಿಯನ್ನು ಸೇರುತ್ತಿದೆ.ಆದರೂ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗುರುವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯ ಪುರಸಭಾ ವ್ಯಾಪ್ತಿಯಲ್ಲಿ ಎಷ್ಟು ಕಟ್ಟಡಗಳಿಗೆ ಎಸ್. ಟಿ .ಪಿ ಪ್ಲಾಂಟ್ ಇದೆ ಮತ್ತು ಇಲ್ಲ ಎಂಬ ಕುರಿತು ಮುಂದಿನ ಸಾಮಾನ್ಯ ಸಭೆಗೆ ಸ್ಪಷ್ಟ ಮಾಹಿತಿ ನೀಡಬೇಕು,ಇಲ್ಲದಿದ್ದಲ್ಲಿ ಸದನದೊಳಗೆ ಪ್ರತಿಭಟಿಸುವುದಾಗಿ  ಎಚ್ಚರಿಸಿ ಗಮನ ಸೆಳೆದರು. 

ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ಲುಕ್ಮಾನ್ ಕೈಕಂಬದ ಕಟ್ಟಡವೊಂದರ ಕೊಳಚೆ ನೀರು ರಸ್ತೆಯ ಚರಂಡಿಗೆ ಹರಿಯುತ್ತಿದೆ.ಆ ಕಟ್ಟಡಕ್ಕೆ ಪುರಸಭೆ ನೊಟೀಸ್ ಜಾರಿ ಮಾಡುವ,ವಿದ್ಯುತ್ ಕಡಿತಗೊಳಿಸುವ ಮಾತು ಕೊಟ್ಟರೂ, ಕಟ್ಟಡದ ಮಾಲೀಕರು ಕ್ಯಾರೇ ಮಾಡುತ್ತಿಲ್ಲ ಎಂದು ಆತೃಪ್ತಿ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಗಂಗಾಧರ್,ವಾಸುಪೂಜಾರಿ ಅವರು ಪುರಸಭೆಯಿಂದ ಯಾವುದೇ ಕ್ರಮ ಆಗದಿರುವುದರಿಂದ ಸದಸ್ಯರು ಸಭೆಗೆ ಬರುವುದನ್ನೇ ನಿಲ್ಲಿಸಿದ್ದಾರೆ ಎಂದರು. ಆಗ ಸದಸ್ಯ ಗೋವಿಂದ ಪ್ರಭು ಮಧ್ಯಪ್ರವೇಶಿಸಿ ಕೇವಲ ಕೈಕಂಬ ಮಾತ್ರವಲ್ಲ ನನ್ನ ವಾಡ್೯ ನಲ್ಲಿ ಸಹಿತ ವಿವಿಧ ಕಡೆಗಳಲ್ಲಿ‌ದೆ. ಅಧಿಕಾರಿಗಳು ಸರಿಯಾಗಿ‌ ಪರಿಶೀಲಿಸದೆ ಮತ್ತು ಯಾವುದೋ ಒತ್ತಡಕ್ಕೆ ಮಣಿದು ಕಟ್ಟಡ ನಂಬರ್ ನೀಡುತ್ತಾರೆ ಎಂದರು.

ಪುರಸಭಾ ವ್ಯಾಪ್ತಿಯಲ್ಲಿ ಎಸ್ .ಟಿ.ಪಿ.ಇರುವ ಮತ್ತು ಇಲ್ಲದ ಕಟ್ಟಡಗಳ ಪೂರ್ಣ ಮಾಹಿತಿಯನ್ನು ಮುಂದಿನ ಸಾಮಾನ್ಯ ಸಭೆಗೆ ನೀಡಬೇಕು ಇಲ್ಲದಿದ್ದಲ್ಲಿ ಸದನದ ಬಾವಿಯಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಸದಸ್ಯ ಲುಕ್ಮಾನ್ ಎಚ್ಚರಿಸಿದರು.ಬಂಟ್ವಾಳ ನಗರದಲ್ಲು ಅಂಗಡಿ ಮುಂದೆ ಅಳವಡಿಸಿದ ಪೈಪ್ ನಿಂದ ರಸ್ತೆಯಲ್ಲಿಯೇ ನೀರು ಹರಿಯುತ್ತಿದ್ದು,ವಾಹನ ಸಂಚಾರದ ವೇಳೆ ಪಾದಚಾರಿಗಳ ಮೇಲೆಯ ನೀರು ಸಿಂಪಡಿಸುತ್ತಿದೆ ಎಂದು ಸದಸ್ಯರು ಸಭೆಗೆ ತಿಳಿಸಿದರು.

18 ಕಟ್ಟಡಕ್ಕೆ ಡೋರ್ ನಂಬರ್:

ಕೈಕುಂಜ ಪರಿಸರದಲ್ಲಿ ಎರಡು ಸೆಂಟ್ಸ್ ಸ್ಥಳದಲ್ಲಿ ನಿರ್ಮಾಣವಾದ ಕಟ್ಟಡವೊಂದರಲ್ಲಿ 18 ಕದ ನಂಬರ್ ನೀಡಲಾಗಿದೆ ಎಂದು ಸದಸ್ಯ ಗೋವಿಂದಪ್ರಭು ಪುರಾವೆ ಸಹಿತ ಸಭೆಯ ಗಮನಸೆಳೆದರು.ಇದನ್ನು ಕೇಳಿದ ಸದಸ್ಯರು ಅವಕ್ಕಾದರು. ಆದರೆ ಇದಕ್ಕೆ ಅಧ್ಯಕ್ಷರಾಗಲೀ,ಮುಖ್ಯಾಧಿಕಾರಿಯವರಾಗಲಿ ಯಾವುದೇ ಉತ್ತರ ನೀಡಲಿಲ್ಲ,

ಪ್ರತಿಧ್ವನಿಸಿದ ಕಂಚಿನಡ್ಕಪದವು; 

ಸಜೀಪನಡುಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ವಿಲೇವಾರಿ ಸಂಸ್ಕರಣ ಘಟಕದಲ್ಲಿ ಕಸ ವಿಲೇವಾರಿ ವಿಚಾರ ಸಭೆಯಲ್ಲಿ ಪ್ರತಿಧ್ವನಿಸಿತು. ಸಂಗ್ರಹವಾದ ಹಸಿ ಕಸವನ್ನು ಎಲ್ಲಿ ವಿಲೇ ಮಾಡಲಾಗುತ್ತಿದೆ.ಬಂಟ್ವಾಳ ಶಾಸಕರು ಉದಾರತೆ ತೋರಿ ತಮ್ಮ ಜಾಗದಲ್ಲಿ ಹಸಿ ಕಸ ವಿಲೇಗೆ ಅವಕಾಶ ಕೊಟ್ಟರೇ ನೀವು ಅವರಿಗೆ ಕೊಟ್ಟ ಗೌರವ ಏನು? ಈಗ ಶಾಸಕರ ಜಾಗಕ್ಕೆ ಕಸ ಸಾಗಟ ಮಾಡದಿರಲು ಕಾರಣವೇನು?ಇದನ್ನೇ ನಿಭಾಯಿಸಲು ಸಾಧ್ಯವಾಗದಿರುವಾಗ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಸದಸ್ಯ ಗೋವಿಂದ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.ಸದಸ್ಯ ಹರಿಪ್ರಸಾದ್ ಮಾತನಾಡಿ ಕಸದಿಂದ ರಸ ತೆಗೆಯುವ ಈ ಕಾಲದಲ್ಲಿ ಹಸಿಕಸದಿಂದ ಗೊಬ್ಬರ ತಯಾರಿಸಬಹುದಿತ್ತು. ಇದೀಗ ಹಸಿಕಸ ಒಣಕಸವನ್ನು ಘಟಕಕ್ಕೆ ಸಾಗಿಸಲಾಗುತ್ತಿದ್ದು,ಪಕ್ಕದ ಸ್ಮಶಾನದ ಬಳಿ ಹಸಿಕಸ ರಾಶಿ ಹಾಕಲಾಗಿದೆ.ಸ್ಥಳೀಯರು ಈ ದುರ್ವಾಸನೆಯಿಂದ  ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ,ಈಗಾಗಲೇ ಅಲ್ಲಿ ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು,20ಶೇ.ಬಾಕಿ ಇದೆ.ಈ ತಿಂಗಳ ಅಂತ್ತದೊಳಗೆ ಕಾಮಗಾರಿ ಪೂರ್ಣಗೊಳುಸಲಾಗುವುದು ಎಂದರು.ಕೊನೆಗೆ ಹಸಿಕಸವನ್ನು ಗೊಬ್ಬರ ತಯಾರಿಸುವುದು ಒಣಕಸವನ್ನು ವಿಲೇಮಾಡಲು ಟೆಂಡರ್ ಕರೆದು ವಹಿಸಿಕೊಡಲು ನಿರ್ಧರಿಸಲಾಯಿತು.

ಅನಧಿಕೃತ ಗೂಡಂಗಡಿ ತೆರವಿಗೆ ನಿರ್ಣಯ:

ಮೆಲ್ಕಾರ್,ಬಿ.ಸಿ.ರೋಡ್ ಪರಿಸರದಲ್ಲಿರುವ  ಅನಧಿಕೃತ ಗೂಡಂಗಡಿಗಳನ್ನು ಪೊಲೀಸರ ಸಹಕಾರ ಪಡೆದು ತೆರವುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಕಳೆದ ಒಂದು ವರ್ಷದಿಂದ ಪುರಸಭೆಯಲ್ಲಿ ಖಾಲಿರುವ ಆರೋಗ್ಯ ನಿರೀಕ್ಷಕರ ಹುದ್ದೆಗೆ ಖಾಯಂ ಆರೋಗ್ಯ ನಿರೀಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಸಭೆ ನಿರ್ಣಯ ಕೈಗೊಂಡಿತು.

ಪ.ಜಾ.ಪ.ಪಂ.ದವರಿಗೆ ಉಚಿತವಾಗಿ ನೀರು ಪೂರೈಕೆ ವಿಚಾರಕ್ಕೆ ಸಂಬಂಧಿಸಿ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.

ವಾರದಿಂದ ನೀರಿಲ್ಲ: 

ಕಳೆದ ಒಂದುವಾರದಿಂದ ಬಿ.ಸಿ.ರೋಡು ಬಸ್ ನಿಲ್ದಾಣದ  ಹಿಂಭಾಗದ ಪರಿಸರದಲ್ಲಿ ಒಂದು ವಾರದಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಈಗ ಮತ್ತೆ ನೀರಿಲ್ಲ ಎಂದು ಕರೆ ಬಂತು ಎಂದು ಸದಸ್ಯೆ ವಿದ್ಯಾವತಿ ಪ್ರಮೋದ್ ಕುಮಾರ್ ಸಭೆಯ ಗಮನಸೆಳೆದರು.ತಕ್ಷಣ ಸರಿಪಡಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದೆಂದು ಮುಖ್ಯಾಧಿಕಾರಿ ಸ್ವಾಮಿ ಹಾಗೂ ಅಧ್ಯಕ್ಷ ಶರೀಫ್ ಭರವಸೆಯಿತ್ತರು.

ಉಪಾಧ್ಯಕ್ಷೆ ಜೆಸಿಂತಾ ಡಿಸೋಜ,ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ವೇದಿಕೆಯಲ್ಲಿದ್ದರು.ಸದಸ್ಯರಾದ ವಾಸುಪೂಜಾರಿ,ಗಂಗಾಧರ,ಮಹಮ್ಮದ್ ನಂದರಬೆಟ್ಟು,ಮೊನೀಶ್ ಆಲಿ, ಸಿದ್ದೀಕ್,ಶಶಿಕಲಾ,ದೇವಕಿ ಮತ್ತಿತರರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.

ಸನ್ಮಾನ

ಸಭೆಗೂ ಮುನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ವೆಂಕಟೇಶ್ ಬಂಟ್ವಾಳ ಅವರನ್ನು ಪುರಸಭೆಯ ವತಿಯಿಂದ ಸನ್ಮಾನಿಸಿ,ಅಭಿನಂದಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter