ಭೂಮಿತಾಯಿ ಕೃಷಿಯಲ್ಲಿ ಎಲ್ಲರೂ ತೊಡಗಿಸಿ ಕೊಳ್ಳೋಣ: ಕೊಂಡೆವೂರು ಶ್ರೀ ಯೋಗಾಶ್ರಮದಲ್ಲಿ ಧಾನ್ಯಲಕ್ಷ್ಮಿ ಕೃಷಿ ಯೋಜನೆಯ ಭತ್ತ ಕಟಾವುಕೊಯ್ಲು ಉತ್ಸವ’
ಮುಂಬಯಿ : ಕಾಸರಗೋಡು ಉಪ್ಪಳ ಇಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಕಳೆದ ಭಾನುವಾರ ಕೃಷಿಕ ಆಸಕ್ತರ ಒಗ್ಗೂಡುವಿಕೆಯಿಂದ ಧಾನ್ಯಲಕ್ಷ್ಮಿ ಕೃಷಿ ಯೋಜನೆ'ಯಲ್ಲಿ ಸಾವಯವವಾಗಿ ಬೆಳೆಸಿದ ಭತ್ತ ಕಟಾವು
ಕೊಯ್ಲು ಉತ್ಸವ’ ಸಂಭ್ರಮದಲ್ಲಿ ನಡೆಯಿತು.
ಕೊಂಡೆವೂರು ಕ್ಷೇತ್ರದ ಮಠಾಧಿಪತಿ ಶ್ರೀ ಶ್ರೀ ಯೋಗನಂದ ಸರಸ್ವತೀ ಸ್ವಾಮೀಜಿ ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ‘ನಮ್ಮೆಲ್ಲರ ತಾಯಿ ಭಾರತ ಮಾತೆಯ ಈ ಭೂಮಿ ತಾಯನ್ನು ಕೃಷಿಮಾಡುವ ಮೂಲಕ ಹಸಿರಿನಿಂದ ಶೃಂಗರಿಸಿ, ಶುದ್ಧ ಆಹಾರದ ಜೊತೆ ಆಮ್ಲಜನಕವನ್ನೂ ಪಡೆಯೋಣ, ಪ್ರತಿಯಬ್ಬರೂ ತಮ್ಮ ಅನುಕೂಲವಿದ್ದಷ್ಟು ಕೃಷಿ ಮಾಡೋಣ’ ಎಂದು ಕರೆ ನೀಡಿದರು.
ಕರ್ನಾಟಕ ಸರಕಾರದ ಮಾಜಿ ಎಂಎಲ್‌ಸಿ ಮೋನಪ್ಪ ಎಂ.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಗಳಾಗಿ ಮಂಜೇಶ್ವರ ತಾಲೂಕು ಉಪ ತಹಶೀಲ್ದಾರ್ ಸಿ.ಡೆಲಿ ಪ್ರಸಾದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮುಕೇಶ್ ಹಾಗೂ ಮಂಗಲ್ಪಾಡಿ ಪುರಸಭಾ ನಗರ ಸದಸ್ಯ ವಿಜಯಕುಮಾರ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಶ್ಲಾಘಿಸಿ, ಭತ್ತಕೃಷಿಯ ಅಗತ್ಯತೆಯ ಕುರಿತು ಮಾತನಾಡಿದರು.
ಚಂದ್ರಹಾಸ್ ಶೆಟ್ಟಿ ಕುಳೂರು ಕನ್ಯಾನ ಮತ್ತು ಅಶ್ವತ್ಥ್ ಪೂಜಾರಿ ಚಿಪ್ಪಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕು| ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆಯನ್ನಾಡಿದರು. ಸರ್ವೇಶ್ ಕೊರಂಬಳ ಸ್ವಾಗತಿಸಿ, ಸದಾಶಿವ ಮೋಂತಿಮಾರು ಕಾರ್ಯಕ್ರಮದ ನಿರೂಪಿಸಿದರು. ಭರತ್ ರಾಜ್ ವಂದನಾರ್ಪಣಿ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮುಟ್ಟಾಳೆ ಧರಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕೊಂಬು ಚೆಂಡೆ ವಾದನದೊಡನೆ ಪೂಜ್ಯಶ್ರೀಗಳ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಗದ್ದೆಯೆಡೆಗೆ ಸಾಗಿ, ಕಟಾವು ಮಾಡಲಾಯಿತು. ತೊಂಬತ್ತರ ಇಳಿ ವಯಸ್ಸಿನ ಹೇರೂರಿನ ಕಮಲಮ್ಮ ಮತ್ತು ಚಿಕ್ಕ ಮಕ್ಕಳೂ ಉತ್ಸಾಹದಿಂದ ಕೊಯ್ಲು ಉತ್ಸವದಲ್ಲಿ ಭಾಗವಹಿಸಿದ್ದು ಕೊಯ್ಲು ಉತ್ಸವದ ವಿಶೇಷವಾಗಿತ್ತು.