ಬಂಟ್ವಾಳ: ಕಡೆಯುವ ಕಲ್ಲನ್ನು ತಲೆಯ ಮೇಲೆ ಎತ್ತಿಹಾಕಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮಾಣಿ ಸಮೀಪದ ಕಡೇಶಿವಾಲಯ ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೃತ್ಯವನ್ನು ಮೃತ ವ್ಯಕ್ತಿಯ ಅಳಿಯನೇ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

grinding stone

ಕೊಲೆಯಾದ ವ್ಯಕ್ತಿಯನ್ನು ಕಡೇಶಿವಾಲಯ ನಿವಾಸಿ ಯಾಕೂಬ್(55) ಎಂದು ಹೆಸರಿಸಲಾಗಿದೆ. ಶುಕ್ರವಾರ ಬೆಳಗಿನ ಜಾವ ಮನೆಯ ಕೌಂಪೌಂಡ್ ದಾಟಿ ಒಳಪ್ರವೇಶಿಸಿದ ದುಷ್ಕರ್ಮಿ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಯಾಕೂಬ್ ಜೊತೆಯಲ್ಲಿ ಅವರ ಪತ್ನಿ ಮತ್ತು ಮಗಳು ವಾಸಿಸುತ್ತಿದ್ದು, ಯಾಕೂಬ್ ಅವರ ಮಗಳಿಗೆ ಮದುವೆಯಾಗಿದ್ದು, ಗಂಡನ ಮನೆಯಲ್ಲಿ ಕಲಹವಾದ ಕಾರಣ ತವರುಮನೆಗೆ ಬಂದು ಉಳಿದಿದ್ದರು. ಯಾಕೂಬ್ ಮಗಳ ಗಂಡ ಖಾಸಿಂ ಎಂಬಾತ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು, ಇದನ್ನು ಯಾಕೂಬ್ ವಿರೋಧಿಸಿದ್ದರು, ಈ ಹಿನ್ನೆಲೆಯಲ್ಲಿ ಮಾವ-ಅಳಿಯನ ಮಧ್ಯೆ ಗಲಾಟೆ ನಡೆದಿತ್ತು. ಹೀಗಾಗಿ ಖಾಸಿಂ ಕೊಲೆಯನ್ನು ಮಾಡಿರಬೇಕೆಂದು ಬಲವಾಗಿ ಶಂಕಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್‍ಸ್ಪೆಕ್ಟರ್ ಬೆಳ್ಳಿಯಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶಂಕಿತ ಆರೋಪಿ ಖಾಸಿಂ ತಲೆಮರೆಸಿಕೊಂಡಿದ್ದು, ಆತನ ಹುಡುಕಾಟ ಮುಂದುವರಿದಿದೆ.

By Suddi9

Leave a Reply

Your email address will not be published. Required fields are marked *