ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು
ಮುಂಬೈ: ಕಣ್ಣಾಮುಚ್ಚಾಲೆ ಆಡುತ್ತಿದ್ದ ಸಂದರ್ಭ 7 ಅಂತಸ್ತಿನ ಕಟ್ಟಡದ ಲಿಫ್ಟ್ ಬಾಗಿಲಿನಲ್ಲಿದ್ದ ಸಣ್ಣ ಕಿಟಕಿಗೆ ತಲೆ ಹಾಕಿದ್ದರಿಂದ 16 ವರ್ಷದ ಬಾಲಕಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಮುಂಖರ್ದ್‌ನಲ್ಲಿ ನಡೆದಿದೆ.
ವರದಿಗಳ ಪ್ರಕಾರ ಮೃತ ಬಾಲಕಿ ರೇಶ್ಮಾ ಖಾರವಿ ತನ್ನ ಹೆತ್ತವರೊಂದಿಗೆ ಮುಂಖರ್ದ್ ಸಾಥೆ ನಗರದಲ್ಲಿ ನೆಲೆಸಿದ್ದಳು. ಶುಕ್ರವಾರ ಆಕೆ ತನ್ನ ಇಬ್ಬರು ಕಿರಿಯ ಸಹೋದರರೊಂದಿಗೆ ಮುಂಖರ್ದ್‌ನ ಲಲ್ಲುಭಾಯ್ ಕಾಂಪೌಂಡ್‌ನಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದಳು.
ಬಾಲಕಿ ತನ್ನ ಸಹೋದರರು ಹಾಗೂ ಸಂಬಂಧಿಕರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. 7 ಅಂತಸ್ತಿನ ಕಟ್ಟಡದಲ್ಲಿ ಬಾಲಕಿ 5 ನೇ ಮಹಡಿಯಿಂದ ಲಿಫ್ಟ್‌ನ ಬಾಗಿಲಿನಲ್ಲಿದ್ದ ಸಣ್ಣ ಕಿಟಕಿಯೊಳಗಡೆ ತನ್ನ ತಲೆಯನ್ನು ಹಾಕಿದ್ದಾಳೆ. ಲಿಫ್ಟ್ 7 ನೇ ಮಹಡಿಯಿಂದ ಕೆಳಕ್ಕೆ ಬಂದಾಗ ಆಕೆಯ ತಲೆಗೆ ಬಡಿದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಗೋವಂಡಿಯ ಶತಾಬ್ದಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಬಾಲಕಿ ಸಾವನ್ನಪ್ಪಿದ್ದಾಳೆ.
ಲಿಫ್ಟ್‌ನ ಬಾಗಿಲಿನಲ್ಲಿದ್ದ ಕಿಟಕಿಯನ್ನು ಮುಚ್ಚದೇ ಹೋಗಿದ್ದಕ್ಕೆ ಈ ದುರ್ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದಿಂದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸುವುದಾಗಿ ಮುಂಖರ್ದ್ ಪೊಲೀಸರು ತಿಳಿಸಿದ್ದಾರೆ.