ಬುಡೋಳಿ: ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ೩೦ರಂದು ನೂತನ ಕಟ್ಟಡ ಲೋಕಾರ್ಪಣೆ
ಬಂಟ್ವಾಳ: ತಾಲ್ಲೂಕಿನ ಪುಂಚೋಡಿ ಸಮೀಪದ ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಾಣಗೊಂಡಿದೆ.

ಪುಂಚೋಡಿ ಸಮೀಪದ ಬುಡೋಳಿ ಎಂಬಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ರೂ ೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಇದೇ ೩೦ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಕಾಟಿಪಳ್ಳ ಜಾನಕಿ ಚಾರಿಟೇಬಲ್ ಸೇವಾ ಟ್ರಸ್ಟ್ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಟಿಪಳ್ಳ ಜಾನಕಿ ಚಾರಿಟೇಬಲ್ ಸೇವಾ ಟ್ರಸ್ಟ್ ಮತ್ತು ವಿದ್ಯಾಭಿಮಾನಿಗಳ ಸಹಕಾರದಲ್ಲಿ ಸುಸಜ್ಜಿತ ಐದು ಕೊಠಡಿ ಸಹಿತ ನೂತನ ಕಟ್ಟಡ ನಿರ್ಮಿಸಲಾಗಿದೆ. ಈ ಹಿಂದೆ ೮ ಮಂದಿ ವಿದ್ಯಾರ್ಥಿಗಳು ಮಾತ್ರ ಇದ್ದು, ಇದೀಗ ೪೦ ಕ್ಕೆ ಏರಿಕೆಗೊಂಡು ಮತ್ತೆ ೧೦೦ಕ್ಕೆ ಏರಿಸುವ ಗುರಿ ಹೊಂದಿದೆ. ಈಗಾಗಲೇ ಹೆಚ್ಚುವರಿ ಶಿಕ್ಷಕಿಯರನ್ನು ನೇಮಕಗೊಳಿಸಿ ಎಲ್ ಕೆ ಜಿ ಮತ್ತು ಯು ಕೆ ಜಿ ಆರಂಭಿಸ ಲಾಗುವುದು ಎಂದರು.
ಇದೇ ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಕಟೀಲು ಕ್ಷೇತ್ರದ ಅನಂತ ಪದ್ಮನಾಭ ಅಸ್ರಣ್ಣ ನೂತನ ಕಟ್ಟಡ ಉದ್ಘಾಟಿಸಲಿದ್ದು, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಕರಿಮಲೆ ಚರ್ಚಿನ ಧರ್ಮಗುರು ಲಿಯೋ ವೇಗಸ್, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಸಂಚಾಲಕ ಶ್ರೀಪತಿ ಭಟ್ ಪುಂಚೋಡಿ, ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ ಕುಮಾರ್ ಜೈನ್, ಪದಾಧಿಕಾರಿಗಳಾದ ಕೆ.ಎನ್.ಶೇಖರ್, ದೇವಪ್ಪ ಕುಲಾಲ್ ಪಂಜಿಕಲ್ಲು, ಶಶಿಧರ ಆಚಾರ್ಯ, ಕೇಶವ ಪೂಜಾರಿ ಅಸಲ್ದೋಡಿ, ಮುಖ್ಯಶಿಕ್ಷಕ ದೊಡ್ಡಪ್ಪ ಎಚ್. ಇದ್ದರು.