“ತರಕಾರಿ ಬಳಸಿ ಆರೋಗ್ಯ ವೃದ್ಧಿಸಿ ಮತ್ತು ರೈತರನ್ನು ಪ್ರೋತ್ಸಾಹಿಸಿ”:ಜಗದೀಶ್ ಅಮೀನ್
ಕೈಕಂಬ: “ತರಕಾರಿ ಬಳಸಿ ಆರೋಗ್ಯ ವೃದ್ಧಿಸಿ ಮತ್ತು ರೈತರನ್ನು ಪ್ರೋತ್ಸಾಹಿಸಿ” ಧ್ಯೇಯ ವಾಕ್ಯದಡಿ ಸುಂಕದಕಟ್ಟೆಯ ಗೂಡುದೀಪ ಕಲಾವಿದ ಜಗದೀಶ್ ಅಮೀನ್ ಅವರು ಸುಮಾರು ೨೫ ಬಗೆಯ ಉಪಯೋಗಕ್ಕೆ ಬಾರದ ತರಕಾರಿ ಬೀಜಗಳಿಂದ ತುಳುನಾಡಿನ ವಿವಿಧ ಕಲಾ ಪ್ರಕಾರ ಅನಾವರಣಗೊಳಿಸಿದ ವಿಶಿಷ್ಟ ಹಾಗೂ ಆಕರ್ಷಕ ಗೂಡುದೀಪವು ಈ ಬಾರಿ ೩ ದ್ವಿತೀಯ ಹಾಗೂ ಒಂದು ತೃತೀಯ ಬಹುಮಾನ ಲಭಿಸಿದೆ.
ಅಮೀನ್ ಅವರು ತರಕಾರಿ ಬೀಜಗಳಿಂದ ತಯಾರಿಸಿದ ಗೂಡುದೀಪವು ಮೂಡಬಿದ್ರೆಯಲ್ಲಿ ಯುವವಾಹಿನಿ, ನಂತೂರಿನಲ್ಲಿ ಮದರ್ ತೆರೆಸಾ ವೇದಿಕೆ ಮತ್ತು ಕೊಂಚಾಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ ಗೂಡುದೀಪ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕುದ್ರೋಳಿಯಲ್ಲಿ ನಮ್ಮ ಕುಡ್ಲ ಪ್ರಾಯೋಜಿಸಿದ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿದೆ. ಇವರು ಕಳೆದ ವರ್ಷ ಸಿರಿಧಾನ್ಯ ಬಳಸಿ ತಯಾರಿಸಿದ ಗೂಡುದೀಪವು ಜಿಲ್ಲೆಯ ಹಲವೆಡೆ ಬಹುಮಾನ ಗಳಿಸಿತ್ತು.
“ಸೃಷ್ಟಿಸಿಹೆನೀ ಗೂಡುದೀಪಂ, ನಿಜದಿಂ ಬಿಸಾಕು ಜೀಜದಿಂ” ಎಂಬ ಕಾವ್ಯ ಸಾಲು ನೆನಪಿಸುವ ರೀತಿಯಲ್ಲಿ ಜಗದೀಶ್ ಅವರ ಕಲಾತ್ಮಕ ಗೂಡುದೀಪ ರೂಪುಗೊಂಡಿದೆ. ಗೂಡುದೀಪದ ಗೂಡಿನಲ್ಲಿ ಬೀಜಗಳಿಂದ ಯಕ್ಷಗಾನ, ಭರತನಾಟ್ಯಂ, ಕಂಬಳ, ಕೋಳಿ ಅಂಕ, ದೀಪ, ತುಳಿಸಿ, ಸೂರ್ಯ ಅಸ್ತಮಾನ ಹಾಗೂ ಗೂಡುದೀಪದ ಬಾಲದಲ್ಲಿ ಆಟಿ ಕಳೆಂಜ, ಚೆಂಡೆ ವಾದನ, ಡೊಳ್ಳು ಕುಣಿತ, ಹುಲಿ ವೇಷ, ಕೋಲಾಟ, ಬಂಜಾರ ನೃತ್ಯ, ಬುಡಕಟ್ಟು ಜನಾಂಗದ ನೃತ್ಯ, ಕಥಕ್ ಇತ್ಯಾದಿ ಚಿತ್ರಿಸಲಾಗಿದೆ.
ಗೂಡುದೀಪ ತಯಾರಿಸಲು ಸುಮಾರು ೨ ತಿಂಗಳಲ್ಲಿ ದಿನಕ್ಕೆ ೯ ಗಂಟೆ ಕೆಲಸ ಮಾಡಲಾಗಿದ್ದು, ಇದರಲ್ಲಿ ಮನೆಯ ಮಕ್ಕಳು, ಪತ್ನಿ, ಗೆಳೆಯರ ಸಹಕಾರ ಮರೆಯುವಂತಿಲ್ಲ. ಮೊಳಕೆ ಬಾರದ ಬೀಜಗಳನ್ನು ಕೆಲವರು ನೀಡಿದರೆ, ಸುಂಕದಕಟ್ಟೆಯ ಅನ್ನಛತ್ರದಲ್ಲಿ ಬಿಸಾಡಿದ ಕುಂಬಳಕಾಯಿ, ಬೂದು ಕುಂಬಳಕಾಯಿ ಬೀಜ ಸಂಗ್ರಹಿಸಿದೆ. ಸುಂಕದಕಟ್ಟೆಯ ಫ್ರಾಂಕ್ಲಿನ್ ಡಿ’ಸೋಜ ಎಂಬವರು ಸಾಕಷ್ಟು ಬೀಜ ನೀಡಿದ್ದಾರೆ. ಹೀಗೆ ಕಳೆದ ಎರಡು ವರ್ಷದಿಂದ ವಿವಿಧೆಡೆಯಿಂದ ಸಂಗ್ರಹಿಸಲಾದ ತರಕಾರಿ ಬೀಜಗಳಿಂದ ಒಂದು ಸುಂದರ ಗೂಡುದೀಪ ತಯಾರಿಸಿದೆ ಎಂದು ಜಗದೀಶ್ ಅಮೀನ್ ಹೇಳುತ್ತಾರೆ.