ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ – ಬೋನ್‍ನಲ್ಲಿ ನಾಯಿಯನ್ನು ಕಟ್ಟಿ ಹಾಕಿ ಕಾವಲು
ಮಂಡ್ಯ: ಕೆಆರ್‌ಎಸ್ (KRS) ಡ್ಯಾಂ (Dam) ಬಳಿ ಪದೇ ಪದೇ ಚಿರತೆ (Leopard) ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ವಿಶ್ವ ಪ್ರಸಿದ್ಧ ಬೃಂದಾವನಕ್ಕೆ (Brindavana) ಪ್ರವಾಸಿಗರ ನಿರ್ಬಂಧ ಮುಂದುವರಿದಿದೆ.
ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಲ್ಲಿನ ಸಿಬ್ಬಂದಿ ಡ್ಯಾಂನ ಮೆಟ್ಟಿಲು ಬಳಿ ಗಿಡದ ಗಂಟೆಗಳನ್ನು ಕೀಳುವ ಸಂದರ್ಭದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಅಲ್ಲಿಂದ ಬಂದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನಿನ್ನೆ ಒಂದು ದಿನ ತಾತ್ಕಾಲಿಕವಾಗಿ ಚಿರತೆಯ ಭಯದಿಂದ ಪ್ರವಾಸಿಗರಿಗೆ ಬೃಂದಾವನಕ್ಕೆ ನಿರ್ಬಂಧ ಏರಿದ್ರು. ಆದ್ರೆ ಕಳೆದ ರಾತ್ರಿಯೂ ಅದೇ ಚಿರತೆ ಡ್ಯಾಂನ ಪಕ್ಕದಲ್ಲಿ ಓಡಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಇಂದು ಸಹ ಪ್ರವಾಸಿಗರಿಗೆ ನಿರ್ಬಂಧ ಏರಲಾಗಿದೆ. ಭಾನುವಾರ ಪ್ರವಾಸಿಗರಿಂದ ತುಂಬಿ-ತುಳಕಬೇಕಿದ್ದ ಬೃಂದಾವನ, ಪ್ರವಾಸಿಗರೇ ಇಲ್ಲದೇ ಬಣಗುಡುತ್ತಿದೆ.
ಒಂದು ಕಡೆ ಪ್ರವಾಸಿಗರು ಇಲ್ಲದೇ ಬೃಂದಾವನ ಬಣಗುಡುತ್ತಿದ್ರೆ, ಅತ್ತ ಆಪರೇಷನ್ ಲಿಪರ್ಡ್‍ಗೆ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಮುಂದಾಗಿದೆ. ನಿನ್ನೆ ಕಾಣಿಸಿಕೊಂಡಿರುವ ಸ್ಥಳದಲ್ಲೇ ಬೋನ್ ಇರಿಸಿ ಬೋನ್‍ನಲ್ಲಿ ನಾಯಿಯನ್ನು (Dog) ಕಟ್ಟಿ ಹಾಕಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಈ ಭಾಗದಲ್ಲಿ ಇದೇ ಮೊದಲು ಅಲ್ಲ. ಈ ಹಿಂದೆ ಎರಡು ಬಾರಿ ಚಿರತೆ ಕಾಣಿಸಿಕೊಂಡಿದ್ದು, ಒಂದು ಬಾರಿ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿರುವ ಕಾರಣ ಮುಂದಿನ ಆದೇಶದ ವರೆಗೆ ಪ್ರವಾಸಿಗರ ಹಿತದೃಷ್ಟಿಯಿಂದ ಬೃಂದಾವನಕ್ಕೆ ನಿಷೇಧ ಏರಲಾಗಿದೆ.