ಮುಲುಂಡ್ ; ೬೯ನೇ ವಾರ್ಷಿಕ ಮಹಾಸಭೆ ಪೂರೈಸಿದ ಭಂಡಾರಿ ಸೇವಾ ಸಮಿತಿ ಭಂಡಾರಿ ಬಂಧುತ್ವದ ಶ್ರೇಷ್ಠತೆ ಮೆರೆಯುವಂತಾಗಲಿ: ಆರ್.ಎಂ. ಭಂಡಾರಿ
ಮುಂಬಯಿ: ಸಮಾಜವನ್ನು ಒಗ್ಗೂಡಿಸುವುದೇ ಸಂಘಸಂಸ್ಥೆಗಳ ಉದ್ದೇಶ. ಆ ಮೂಲಕ ಸ್ವಸಮುದಾ ಯದ ಪರಂಪರೆ, ಸಂಪ್ರದಾಯ, ಧಾರ್ಮಿಕ ಆಚಾರ ವಿಚಾರಗಳನ್ನು ಭಾವೀ ಜನಾಂಗಕ್ಕೆ ಪರಿಚಯಿಸುವ ಕೆಲಸ ಸುಲಭ ಸಾಧ್ಯವಾಗಿಸುವಲ್ಲಿ ಸಂಘಸಂಸ್ಥೆಗಳ ಪಾತ್ರ ಪ್ರಧಾನವಾದುದು. ಆ ನಿಟ್ಟಿನಲ್ಲೇ ಭಂಡಾರಿ ಸಮಾಜವನ್ನು ಮುನ್ನಡೆಸಲು ಈ ಸಂಸ್ಥೆಯೂ ಶ್ರಮಿಸುತ್ತಿರುವುದು ಅಭಿಮಾನ ತಂದಿದೆ. ಸಮಾಜ ಬಾಂಧವರ ಉತ್ತೇಜನದಿಂದ ಸಮಾಜದ ಉತ್ತರೋಭಿವೃದ್ಧಿ ಸಾಧ್ಯವಾಗಿದ್ದು, ಮುಂದೆಯೂ ಎಲ್ಲರೂ ಪ್ರೋತ್ಸಾಹಿಸಬೇಕು. ತನ್ನ ಕಾಲಾವಧಿಯಲ್ಲಿ ಸಿದ್ಧಿಸಲಾದ ಆರೋಗ್ಯನಿಧಿ ಮತ್ತು ಶೈಕ್ಷಣಿಕ ನಿಧಿಯನ್ನು ಮತ್ತಷ್ಟು ವೃದ್ಧಿಸಿ ಸಮಾಜದ ಕ್ಷೇಮಾಭಿವೃದ್ಧಿಗೆ ಬಳಸುವಂತಾಗಲಿ. ಎಲ್ಲರೂ ಐಕ್ಯತೆಯಿಂದ ಒಗ್ಗೂಡಿ ಸಹೋದರತ್ವದ ಬಾಳನ್ನು ರೂಢಿಸಿ ಭಂಡಾರಿ ಬಂಧುತ್ವದ ಶ್ರೇಷ್ಠತೆಯನ್ನು ಮೆರೆಯುವಂತಾಗಲಿ ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ ತಿಳಿಸಿದರು.
ಸುಮಾರು ಏಳು ದಶಕಗಳಿಂದ ಮುಂಬಯಿಯಲ್ಲಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ತನ್ನ ೬೯ನೇ ವಾರ್ಷಿಕ ಮಹಾಸಭೆಯನ್ನು ಕಳೆದ ಭಾನುವಾರ (ಅ.೧೮) ಮುಲುಂಡ್ ಪಶ್ಚಿಮದಲ್ಲಿನ ಶ್ರೀ ಕಛ್ ದೇಶೀಯ ಸರಸ್ವತ್ ಸಭಾಗೃಹದಲ್ಲಿ ನಡೆಸಿದ್ದು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ನ್ಯಾಯವಾದಿ ಆರ್.ಎಂ ಭಂಡಾರಿ ಮಾತನಾಡಿದರು.
ಸಮಿತಿಯ ಮಾಜಿ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ, ಉಪಾಧ್ಯಕ್ಷ ಪ್ರಭಾಕರ್ ಪಿ.ಭಂಡಾರಿ ಥಾಣೆ, ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ, ಸಮಿತಿಯ ಗೌರವ ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಆರ್.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ. ಭಂಡಾರಿ ವೇದಿಕೆಯಲ್ಲಿ ಆಸೀನರಾಗಿದ್ದು ೨೦೨೨-೨೫ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು ಪ್ರಭಾಕರ್ ಪಿ.ಭಂಡಾರಿ ಇವರನ್ನು ಅಧ್ಯಕ್ಷರನ್ನಾಗಿ ಮತ್ತಿತರ ಪದಾಧಿಕಾರಿಗಳನ್ನು ಸಭೆಯು ಆಯ್ಕೆಗೊಳಿಸಿತು. ನಿರ್ಗಮನ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ ನೂತನ ಅಧ್ಯಕ್ಷರಿಗೆ ಅಧಿಕಾರ ವಹಿಸಿ ಶುಭ ಕೋರಿದರು. ಹಾಗೂ ಪದಾಧಿಕಾರಿಗಳು ಸಮಿತಿ ಸದಸ್ಯರ ಮಕ್ಕಳಿಗೆ ೨೦೨೨-೨೩ರ ಸಾಲಿನ ಶೈಕ್ಷಣಿಕ ವಿದ್ಯಾರ್ಥಿ ವಿತರಿಸಿದರು.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಪುರುಷೋತ್ತಮ ಜಿ.ಭಂಡಾರಿ, ಜೊತೆ ಕಾರ್ಯದರ್ಶಿ ರಂಜಿತ್ ಎಸ್.ಭಂಡಾರಿ ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪಲ್ಲವಿ ರಂಜಿತ್ ಭಂಡಾರಿ, ಜಯಶೀಲ ಯು.ಭಂಡಾರಿ, ಕೇಶವ ಟಿ.ಭಂಡಾರಿ, ರಾಕೇಶ್ ಎಸ್.ಭಂಡಾರಿ, ವಿಶ್ವನಾಥ್ ಬಿ.ಭಂಡಾರಿ, ರುಕ್ಮಯ ಭಂಡಾರಿ, ಕರುಣಾಕರ ಭಂಡಾರಿ ಕಲ್ಯಾಣ್, ರಮಾನಂದ ಕೆ.ಭಂಡಾರಿ, ಬಾಲಕೃಷ್ಣ ಪಿ.ಭಂಡಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.
ಶ್ರೀ ಕಚ್ಚೂರು ನಾಗೇಶ್ವರ ದೇವರನ್ನು ಪೂಜಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು. ಶಾಲಿನಿ ಆರ್.ಭಂಡಾರಿ ಪ್ರಾರ್ಥನೆಯನ್ನಾಡಿದರು. ಕರುಣಾಕರ ಎಸ್.ಭಂಡಾರಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ ವಾರ್ಷಿಕ ಲೆಕ್ಕಪತ್ರಗಳ ವಿವರ ಮಂಡಿಸಿದರು. ಶಶಿಧರ್ ಡಿ.ಭಂಡಾರಿ ವಾರ್ಷಿಕ ಕಾರ್ಯಕ್ರಮಗಳ ಮಾಹಿತಿಯನ್ನಿತ್ತರು. ಹಿರಿಯ ಸದಸ್ಯರುಗಳಾದ ಸೀತಾರಾಮ ಭಂಡಾರಿ, ಶೀನ ಭಂಡಾರಿ ವಡಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ-ಸೂಚನೆಗಳನ್ನಿತ್ತು ಸಂಸ್ಥೆಯ ಉನ್ನತಿಗಾಗಿ ಶುಭಾರೈಸಿದರು. ಪುರುಷೋತ್ತಮ ಭಂಡಾರಿ ವಂದಿಸಿದರು.