ಹಿಜಾಬ್ ವಿವಾದ : ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟ : ಕರ್ನಾಟಕದಲ್ಲಿ ಬಿಗಿ ಬಂದೋಬಸ್ತ್
ಬೆಂಗಳೂರು: ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಅಂತಿಮ ತೀರ್ಪು ಇಂದು ಹೊರಬೀಳಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಉಡುಪಿಯಲ್ಲಿ ಆರಂಭವಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಹಿಜಾಬ್ ವಿವಾದ. ಬಳಿಕ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಹಿಜಾಬ್ ಪರ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇವತ್ತು ಅಂತಿಮತೀರ್ಪು ಹೊರಬೀಳಲಿದ್ದು ಎಲ್ಲರ ಚಿತ್ತ ಈಗ ಸುಪ್ರೀಂಕೋರ್ಟ್ನತ್ತ ನೆಟ್ಟಿದೆ.
ಇಂದು ಬೆಳಗ್ಗೆ 10.30ಕ್ಕೆ ಹಿಜಾಬ್ ವಿವಾದ ಕುರಿತು ಅಂತಿಮ ತೀರ್ಪು ಸುಪ್ರೀಂಕೋರ್ಟ್ನಿಂದ ಹೊರಬೀಳಲಿದೆ. ಜಸ್ಟೀಸ್ ಹೇಮಂತ್ ಗುಪ್ತಾ, ಜಸ್ಟೀಸ್ ಸುಧಾಂಶು ಧುಲಿಯಾ ಪೀಠದಿಂದ ತೀರ್ಪು ಪ್ರಕಟವಾಗಲಿದೆ. ಫೆ.5ರಂದು ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ರಾಜ್ಯ ಸರ್ಕಾರದ ಸುತ್ತೋಲೆಯನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ಮಾರ್ಚ್ 15ರಂದು ತೀರ್ಪು ಪ್ರಕಟಿಸಿತ್ತು. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲ ಅಂತ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ತೀರ್ಪು ಪ್ರಶ್ನಿಸಿ ಹಿಜಾಬ್ ವಿದ್ಯಾರ್ಥಿಗಳು ಸುಪ್ರೀಂ ಮೆಟ್ಟಿಲೇರಿದ್ದರು. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿರುವ ಸುಪ್ರೀಂಕೋರ್ಟ್ ಸೆಪ್ಟೆಂಬರ್ 22ರಂದು ತೀರ್ಪು ಕಾಯ್ದಿರಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾ.ಹೇಮಂತ್ ಗುಪ್ತಾ ಇದೇ ಅಕ್ಟೋಬರ್ 16ರಂದು ಸೇವೆಯಿಂದ ನಿವೃತ್ತರಾಗಲಿದ್ದು ಅದಕ್ಕೂ ಮುನ್ನ ತೀರ್ಪು ನೀಡಲಿದ್ದಾರೆ. ಹಿಜಾಬ್ ನಿಷೇಧದ ಸುತ್ತೋಲೆ ಹಾಗೂ ಹಿಜಾಬ್ ಧಾರ್ಮಿಕ ಅತ್ಯಗತ್ಯ ಧಾರ್ಮಿಕ ಆಚರಣೆಯೋ, ಇಲ್ಲವೋ ಅಂತ ತೀರ್ಪು ನೀಡಲಿದ್ದು ಭಾರಿ ಕುತೂಹಲ ಕೆರಳಿಸಿದೆ.