‘ನವಜೀವನ ಸದಸ್ಯರ ಸಮಾವೇಶ ಕೇಂದ್ರ ಒಕ್ಕೂಟಗಳ ಪದಗ್ರಹಣ’ ಮದ್ಯವ್ಯಸನ ಮುಕ್ತರಿಗೆ ಹೊಸ ಬದುಕು ನೀಡಿದ ಯೋಜನೆ: ಶಾಸಕ ರಾಜೇಶ ನಾಯ್ಕ್
ಬಂಟ್ವಾಳ: ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ‘ನವಜೀವನ ಸದಸ್ಯರ ಸಮಾವೇಶ ಮತ್ತು ಕೇಂದ್ರ ಒಕ್ಕೂಟಗಳ ಪದಗ್ರಹಣ’ ಕಾರ್ಯಕ್ರಮವನ್ನು ಶಾಸಕ ರಾಜೇಶ ನಾಯ್ಕ್ ಉದ್ಘಾಟಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ, ರೊನಾಲ್ಡ್ ಡಿಸೋಜ ಮತ್ತಿತರರು ಇದ್ದಾರೆ.
ಬಂಟ್ವಾಳ ಮಹಾತ್ಮಾ ಗಾಂಧೀಜಿ ಕನಸಿನಂತೆ ಧರ್ಮಸ್ಥಳ ಧಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮದ್ಯ ವ್ಯಸನಮುಕ್ತ ಸಮಾಜ ನಿರ್ಮಿಸುವ ಮೂಲಕ ಅವರಲ್ಲಿ ಹೊಸ ಬದುಕಿನ ಆಶಾಕಿರಣ ಮೂಡಿಸಿದ್ದಾರೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ನವಜೀವನ ಸದಸ್ಯರ ಸಮಾವೇಶ ಮತ್ತು ಕೇಂದ್ರ ಒಕ್ಕೂಟಗಳ ಪದಗ್ರಹಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಹೆಗ್ಗಡೆ ಅವರು ದೇಶದಾದ್ಯಂತ ಯೋಜನೆ ವಿಸ್ತರಿಸಿ ಸಮೃದ್ಧ ಸಮಾಜ ನಿರ್ಮಿಸಲು ಪ್ರಯತ್ನ ನಡೆಸಿದ್ದಾರೆ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮದ್ಯ ವ್ಯಸನಮುಕ್ತರಿಗೆ ಹೆಗ್ಗಡೆ ಅವರು ನವ ಜೀವನ ಕಲ್ಪಿಸಿದ್ದಾರೆ ಎಂದರು. ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಒಕ್ಕೂಟದ ನೂತನ ಅಧ್ಯಕ್ಷ ಚಿದಾನಂದ ರೈ ಕಕ್ಯ, ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ ಶುಭ ಹಾರೈಸಿದರು.
ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ಎ.ರುಕ್ಮಯ ಪೂಜಾರಿ, ಕೈಯೂರು ನಾರಾಯಣ ಭಟ್, ಕಿರಣ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ, ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗಾ, ಕೇಂದ್ರ ಒಕ್ಕೂಟ ಅಧ್ಯಕ್ಷ ಮಾಧವ ವಳವೂರು, ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಅಲ್ಲಿಪಾದೆ, ಚಂದಪ್ಪ ಮೂಲ್ಯ, ಸದಾನಂದ ನಾವೂರ ಮತ್ತಿತರರು ಇದ್ದರು.
ಇದೇ ವೇಳೆ ಭಾಗವತ ಗಿರೀಶ್ ರೈ ಕಕ್ಕೆಪದವು ಜಾಗೃತಿ ಗೀತೆ ಹಾಡಿದರು. ವಿವಿಧ ಬೇಡಿಕೆ ಬಗ್ಗೆ ಶೇಖರ ಸಾಮಾನಿ ಹಕ್ಕೊತ್ತಾಯ ಮಂಡಿಸಿದರು.
ಮದ್ಯಮುಕ್ತರಾದ ಗಿರಿಯಪ್ಪ ವಗ್ಗ , ಪ್ರಕಾಶ್ ಜಯಂತಿ ದಂಪತಿ ಅನಿಸಿಕೆ ವ್ಯಕ್ತಪಡಿಸಿದರು. ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ. ಸ್ವಾಗತಿಸಿ, .ವಿಟ್ಲ ಯೋಜನಾಧಿಕಾರಿ ಚೆನ್ನಪ್ಪ ಗೌಡ ವಂದಿಸಿದರು. ಮೇಲ್ವಿಚಾರಕರಾದ ಶಿವರಂಜನ್ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.